🔥 TRENDING Akali Dal (Punar Surjit) faces interna... भोपाल में बुर्का पहनकर मुस्लिम महिलाएँ... 32-year-old cousin arrested for allege... Sarkari Jameen mein avaidh kabja New Zealand to bat first after losing... હિંમતનગર બસ સ્ટેશન નજીક ભંગારના કેબિનમ...
07 Nov 2026•
ગુજરાતી मराठी ਪੰਜਾਬੀ বাংলা

ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಷೆಡ್ಯೂಲ್ ರಕ್ಷಣೆ ನೀಡಿ: ಡಿಎಸ್ಎಸ್ ಆಗ್ರಹ

✍️ Reporter: ಮಂಜುನಾಥ ಹೂಡೇಂ 🗓 07 Nov 2026, 08:20 AM 👁 13
Share: 💬 WhatsApp 📘 Facebook 𝕏 Post

15 ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಧರಣಿ

ವಿಜಯನಗರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರ್ಪಡೆಗೊಳಿಸಿ ಕಾನೂನು ರಕ್ಷಣೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಾಗೂ ಧರಣಿ ನಡೆಸಲಾಯಿತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಸ್. ದುರುಗೇಶ್ ಕೂಡ್ಲಿಗಿ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೆಚ್ಚಳದ ಮೀಸಲಾತಿ ರದ್ದುಗೊಂಡಿರುವುದು ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಶೇ.50ರಷ್ಟಿದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸಿರುವುದನ್ನು ಅ.12ರಂದು ಹೈಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸ್ಥಾನ ಕಲ್ಪಿಸುವ ಮೂಲಕ ಕಾನೂನು ರಕ್ಷಣೆ ನೀಡಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಿಯೋಗದೊಂದಿಗೆ ಈ ಕುರಿತು ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ವಂತ ನಿವೇಶನವಿಲ್ಲದ ಬಡ ಕುಟುಂಬಗಳಿಗೆ ಸರ್ಕಾರಿ ಅಥವಾ ಖಾಸಗಿ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರ ನಮೂನೆ-57ರ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಜಾಗವನ್ನು 94ಸಿ ಮತ್ತು 94ಸಿಸಿ ಅಡಿ ಸಕ್ರಮಗೊಳಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಡಿಎಸ್ಎಸ್ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಹಾಗೂ ಅವರ ಜನ್ಮದಿನವಾದ ಜೂನ್ 9ರಂದು ಸರ್ಕಾರದಿಂದ ಅಧಿಕೃತವಾಗಿ ಆಚರಣೆ ನಡೆಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿ ಅನುದಾನದ ದುರ್ಬಳಕೆ ತಡೆಗಟ್ಟಲು ಎಸ್ಸಿಪಿ-ಟಿಎಸ್ಪಿ ಕಾಯಿದೆ 2013ರ ಸೆಕ್ಷನ್ 7(ಸಿ) ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಜಾತಿ ಹಾಗೂ ಕೋಮು ಗಲಭೆಗಳಲ್ಲಿ ಮೃತಪಟ್ಟ ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ನೀಡಲಾಗುತ್ತಿರುವ 8.25 ಲಕ್ಷ ರೂ. ಪರಿಹಾರವನ್ನು 25 ಲಕ್ಷ ರೂ.ಗೆ ಹೆಚ್ಚಿಸಿ, ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 72,186 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ, ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಪರಿಶಿಷ್ಟ ಸಮುದಾಯಗಳ ಮೀಸಲಾತಿ, ಭೂಮಿ, ಉದ್ಯೋಗ, ವಸತಿ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಎಚ್. ದುರುಗೇಶ್ ಬಿ.ಟಿ. ಗುದ್ದಿ, ಜಿಲ್ಲಾ ಮುಖಂಡ ಡಿ.ಎಂ. ಈಶ್ವರಪ್ಪ ಸಿದ್ದಾಪುರ, ಕೂಡ್ಲಿಗಿ ತಾಲೂಕು ಸಂಚಾಲಕ ಬಡೆಲಡಕು ದುರುಗೇಶ್, ಕೊಗಳಿ ಉಮೇಶ್, ಕಲ್ಲಹಳ್ಳಿ ನಾಗರಾಜ್, ಟಿ. ಗಂಗಾಧರ್ ಹೊಸಹಳ್ಳಿ, ಶ್ರೀನಿವಾಸ್ ಹೊಸಪೇಟೆ, ಪರಶುರಾಮ ಹಗರಿ ಬೊಮ್ಮನಹಳ್ಳಿ, ಆನಂದ ಹೂವಿನಹಡಗಲಿ, ಚಂದ್ರಪ್ಪ ಹರಪನಹಳ್ಳಿ, ಶಿವಕುಮಾರ್ ಕೊಟ್ಟೂರು, ಬಣವಿಕಲ್ಲು ಬಸಣ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.
📲Get App