🔥 TRENDING PM Modi to Inaugurate Neetish Setu in... Knife Attack on Police Officer in Jaba... Madhya Pradesh BJP Revamps Structure,... UPSC Sends Three Names for Madhya Prad... Congress rebounds in Rajasthan Panchay... ಗ್ರಾಮ ಸಂಪರ್ಕ ಕಾರ್ಯಕ್ರಮ: ಗಡಿಭಾಗದ ಜನರಿಗೆ...
20 Nov 2026•
ગુજરાતી मराठी ਪੰਜਾਬੀ বাংলা

ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶರೈತರ ಬೆಳೆ ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ; ಏಳು ಶಾಸಕರು ಒಗ್ಗಟ್ಟಾದರೆ ಕ್ಷಣಾರ್ಧದಲ್ಲಿ ನೀರು ಬಿಡುಗಡೆ ಸಾಧ್ಯ

✍️ Reporter: Khaja Hussain 🗓 20 Nov 2026, 09:56 PM 👁 14
Share: 💬 WhatsApp 📘 Facebook 𝕏 Post
*ಶಹಾಪುರ್ ಬ್ರೇಕಿಂಗ್ ನ್ಯೂಸ್**

# ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ? ಶಾಸಕಿ ಕರೆಮ್ಮ ನಾಯಕ ವಿರುದ್ಧ ಮುಜಾಹಿದ್ ಮರ್ಚೆಡ್ ಆಕ್ರೋಶ

### ರೈತರ ಬೆಳೆ ಒಣಗುತ್ತಿದ್ದರೂ ಶಾಸಕರಿಗೆ ಕಾಳಜಿಯಿಲ್ಲ; ಏಳು ಶಾಸಕರು ಒಗ್ಗಟ್ಟಾದರೆ ಕ್ಷಣಾರ್ಧದಲ್ಲಿ ನೀರು ಬಿಡುಗಡೆ ಸಾಧ್ಯ

**ಶಹಾಪುರ:** ಕೃಷ್ಣಾ ಮೇಲ್ದಂಡೆ ಯೋಜನೆಯ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನಿರಂತರ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ.) ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ರೈತ ಸಂಘದ ರಾಯಚೂರು ಜಿಲ್ಲಾ ಕಾರ್ಯಾಧ್ಯಕ್ಷ ಮುಜಾಹಿದ್ ಮರ್ಚೆಡ್ ಅವರು ದೇವದುರ್ಗ ಶಾಸಕಿ ಕರೆಮ್ಮ ನಾಯಕ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಭಾಗ್ಯ ಜಲ ನಿಗಮದ ಕಚೇರಿ ಮುಂದೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿಕಾಂತ ಪಾಟೀಲ್ ಮದ್ದರಕಿ ಅವರ ನೇತೃತ್ವದಲ್ಲಿ ನವೆಂಬರ್ 11ರಿಂದ ಆರಂಭಗೊಂಡ ಸತ್ಯಾಗ್ರಹ, ನವೆಂಬರ್ 16ರಂದು ನಡೆದ ಬೃಹತ್ ರ‍್ಯಾಲಿ ಹಾಗೂ ಇಂದು ನಡೆದ 9ನೇ ದಿನದ ಹೋರಾಟದಲ್ಲಿ ಮೂರನೇ ಬಾರಿ ಭಾಗವಹಿಸಿ ಅವರು ಮಾತನಾಡಿದರು.

ರೈತರು ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಪ್ರತಿ ಎಕರೆಗೆ ಸುಮಾರು ₹1 ಲಕ್ಷದಿಂದ ₹1.5 ಲಕ್ಷದವರೆಗೆ ಬಂಡವಾಳ ಹೂಡಿದ್ದಾರೆ. ಆದರೆ, ಸಮರ್ಪಕ ನೀರು ದೊರೆಯದ ಕಾರಣ ಬೆಳೆಗಳು ಒಣಗುವ ಹಂತ ತಲುಪಿವೆ. ಸಾಲ ಮಾಡಿ ಕೃಷಿ ಮಾಡಿರುವ ರೈತರಿಗೆ ಬೆಳೆ ಕೈಗೆ ಬಾರದಿದ್ದರೆ ಅವರ ಬದುಕು ಬೀದಿಗೆ ಬೀಳಲಿದೆ. ಆದರೂ ಸರ್ಕಾರ ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಜನರು ಹಾಗೂ ರೈತರ ಧ್ವನಿ ವಿಧಾನಸೌಧವನ್ನು ತಲುಪುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ಮುಂದಾಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.

ಕೃಷ್ಣಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ನೀರಿನ ಮೇಲೆ ಸುಮಾರು ಏಳು ಶಾಸಕರ ಕ್ಷೇತ್ರಗಳ ರೈತರ ಕೃಷಿ ಅವಲಂಬಿತವಾಗಿದೆ. ಈ ಭಾಗದ ಶಾಸಕರು ಒಗ್ಗಟ್ಟಿನಿಂದ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ನೀರು ಬಿಡುಗಡೆ ಮಾಡಿಸಲು ಸಾಧ್ಯವಿದೆ. ಆದರೆ, ರೈತರ ಸಮಸ್ಯೆ ಎದುರಾದಾಗ ಶಾಸಕರು ಮೌನ ವಹಿಸುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ರೈತರ ಮತ ಕೇಳಲು ಬರುತ್ತಾರೆ ಎಂದು ಟೀಕಿಸಿದರು.

ರೈತರ ಪರವಾಗಿ ನಿಜವಾದ ಕಾಳಜಿ ಹೊಂದಿರುವವರನ್ನೇ ಮುಂದಿನ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುವ ಮೂಲಕ ಜನರು ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ವಿಶೇಷವಾಗಿ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ನಾಯಕ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಹೇಳಿ ಹಲವು ದಿನಗಳು ಕಳೆದಿವೆ. ಆದರೆ, ಈವರೆಗೂ ಸತ್ಯಾಗ್ರಹ ಆರಂಭಿಸಿಲ್ಲ. ರೈತರ ಬೆಳೆಗಳು ಸಂಪೂರ್ಣ ಒಣಗಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದ ನಂತರ ಸತ್ಯಾಗ್ರಹ ಮಾಡುತ್ತೀರಾ? ರೈತರ ನೋವು ಮತ್ತು ಸಂಕಷ್ಟ ನಿಮಗೆ ಯಾವಾಗ ಅರ್ಥವಾಗುತ್ತದೆ? ಎಂದು ಮುಜಾಹಿದ್ ಮರ್ಚೆಡ್ ಪ್ರಶ್ನಿಸಿದರು.

ಕೃಷ್ಣಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸುವ ನಿರ್ಧಾರವನ್ನು ಸರ್ಕಾರ ತಕ್ಷಣ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರ ಬೆಳೆಗಳಿಗೆ ಉಂಟಾಗುವ ನಷ್ಟ ಹಾಗೂ ರೈತರಿಗೆ ಸಂಭವಿಸಬಹುದಾದ ಅನಾಹುತಗಳಿಗೆ ಸಂಬಂಧಿಸಿದ ಶಾಸಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರೈತರ ಬದುಕು ಹಾಗೂ ಬೆಳೆಗಳನ್ನು ಉಳಿಸಲು ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಮುಜಾಹಿದ್ ಮರ್ಚೆಡ್ ಆಗ್ರಹಿಸಿದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App