🔥 TRENDING Tamil Nadu MLA VS Babu, Who Defeated M... Former Hazaribag MP Passes Away at 90 Bhopal’s New ‘Khel Gaon’ to Blend Hock... Madhya Pradesh unveils Rs 4.38 lakh cr... अजमेर में पंचायती चुनाव की मतगणना से ए... तिलहर में सपा के PDA कार्यकर्ता सम्मेल...
19 Nov 2026•
ગુજરાતી मराठी ਪੰਜਾਬੀ বাংলা
Local

ಬಸವಣ್ಣನವರ ಕುರಿತ ಆಕ್ಷೇಪಾರ್ಹ ಹೇಳಿಕೆಗೆ ಬೀದರ್‌ನಲ್ಲಿ ರವಿ ಹುಂಜ ಪ್ರತಿಕೃತಿ ದಹನ

✍️ Reporter: Basavaraj pujari 🗓 19 Nov 2026, 07:24 PM 👁 22
Share: 💬 WhatsApp 📘 Facebook 𝕏 Post

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಲೇಖಕ ರವಿ ಹುಂಜ ವಿರುದ್ಧ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಬೀದರ್‌ನಲ್ಲಿ ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿಯನ್ನು ದಹಿಸಿದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಅನಿವಾಸಿ ಭಾರತೀಯ ಲೇಖಕ ರವಿ ಹುಂಜ ವಿರುದ್ಧ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಬೀದರ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರವಿ ಹುಂಜ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಚಪ್ಪಲಿ ಏಟು ಕೊಟ್ಟು, ಬಳಿಕ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ಹೊರಹಾಕಿದರು.

ನಂತರ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಭಾರತೀಯ ಬಸವ ಬಳಗ, ಲಿಂಗಾಯತ ಸಮಾಜ, ಬಸವ ಕೇಂದ್ರ ಹಾಗೂ ಇತರ ಬಸವ ಪರ ಸಂಘಟನೆಗಳ ವತಿಯಿಂದ ರವಿ ಹುಂಜ ವಿರುದ್ಧ ಸಾಮೂಹಿಕ ದೂರು ಸಲ್ಲಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಬಸವಣ್ಣನವರು 12ನೇ ಶತಮಾನದಲ್ಲೇ ಸಮಾನತೆ, ಕಾಯಕ, ದಾಸೋಹ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಎಂದು ಹೇಳಿದರು. ರವಿ ಹುಂಜ ಬಸವಣ್ಣನವರ ವ್ಯಕ್ತಿತ್ವವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವುದು ತೀವ್ರ ಖಂಡನೀಯ ಎಂದು ಟೀಕಿಸಿದರು. ಇತಿಹಾಸದ ಕುರಿತು ವಿಮರ್ಶೆ ಮಾಡುವ ಸ್ವಾತಂತ್ರ್ಯ ಇದ್ದರೂ, ಸೂಕ್ತ ದಾಖಲೆ ಹಾಗೂ ಆಧಾರಗಳಿಲ್ಲದೆ ಅವಹೇಳನಕಾರಿ ಪದಗಳನ್ನು ಬಳಸುವುದು ಸಲ್ಲದು ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರು, ಬಸವಣ್ಣನವರ ಘನತೆ ನಮ್ಮ ಸ್ವಾಭಿಮಾನ ಎಂದು ಹೇಳಿದರು. ಶರಣರ ವಚನ ಪರಂಪರೆಯ ಗೌರವ ಹಾಗೂ ಬಸವ ತತ್ವದ ಮೌಲ್ಯಗಳ ರಕ್ಷಣೆಗಾಗಿ ನಮ್ಮ ಹೋರಾಟ ಕಾನೂನು ಬದ್ಧವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ಸರ್ಕಾರ ರವಿ ಹುಂಜ ಅವರನ್ನು ಕೂಡಲೇ ಬಂಧಿಸಿ, ಅವರ ವಿವಾದಾತ್ಮಕ ಕೃತಿ 'ಬಸವ ಮಂಟಪ'ವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಚನ್ನಬಸವಾನಂದ ಸ್ವಾಮೀಜಿ, ಮಾತೆ ಸತ್ಯದೇವಿ, ಬಸವಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮಿರ್ಚೆ, ಮಲ್ಲಮ್ಮ ಆರ್. ಪಾಟೀಲ, ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಹಾಗೂ ಇತರ ಪ್ರಮುಖರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
📲Get App