🔥 TRENDING 'ਆਧਾਰ ਕਾਰਡ ''ਤੇ ਲਿਖੀ DOB ਨੂੰ ਉਮਰ ਦਾ ਪੱ... जयपुर के बूज जामवरागढ़ में देवउठनी ग्य... ठाणे महानगरपालिका के सार्वजनिक बाथरूम... सबलपुर पंचायत में धुंध के कारण हुआ अत्... Kerala Police Arrest Bengal Man Accuse... Bihar STET 2026 Admit Card Released –...
20 Nov 2026•
ગુજરાતી मराठी ਪੰਜਾਬੀ বাংলা
Local

ಕನಕದಾಸರ ಜಯಂತಿ ಜಿಲ್ಲೆಯಾದ್ಯಂತ ಅರ್ಥಪೂರ್ಣ ಆಚರಣೆಗೆ ಅಧಿಕೃತ ಆದೇಶ ಹೊರಡಿಸಿ: ಗೊಂಡ ಸಮಾಜದ ಒಕ್ಕೂಟ ಮನವಿ

✍️ Reporter: Basavaraj pujari 🗓 20 Nov 2026, 10:57 AM 👁 25
Share: 💬 WhatsApp 📘 Facebook 𝕏 Post

ದಾಸಶ್ರೇಷ್ಠ ಭಕ್ತ ಕನಕದಾಸರ 2026ನೇ ಸಾಲಿನ ಜಯಂತಿಯನ್ನು ಬೀದರ್ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಖಾಸಗಿ ವಲಯಗಳಲ್ಲಿ ಕಡ್ಡಾಯವಾಗಿ ಆಚರಿಸಲು ಅಧಿಕೃತ ಆದೇಶ ಹೊರಡಿಸುವಂತೆ ಕಲ್ಯಾಣ ಕರ್ನಾಟಕ ಗೊಂಡ ಸಮಾಜ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಅಂಬರೀಶ ಮಲ್ಲೇಶಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೀದರ್: ದಾಸಶ್ರೇಷ್ಠ ಭಕ್ತ ಕನಕದಾಸರ 2026ನೇ ಸಾಲಿನ ಜಯಂತಿಯನ್ನು ಬೀದರ್ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಖಾಸಗಿ ವಲಯಗಳಲ್ಲಿ ಕಡ್ಡಾಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಧಿಕೃತ ಆದೇಶ ಹೊರಡಿಸುವಂತೆ ಕಲ್ಯಾಣ ಕರ್ನಾಟಕ ಗೊಂಡ ಸಮಾಜ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಅಂಬರೀಶ ಮಲ್ಲೇಶಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಭಕ್ತ ಕನಕದಾಸರು ಕನ್ನಡ ನಾಡಿನ ಮಹಾನ್ ಸಂತರು, ದಾಸಶ್ರೇಷ್ಠರು, ಸಮಾಜ ಸುಧಾರಕರು ಹಾಗೂ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರಾಗಿದ್ದಾರೆ. ತಮ್ಮ ಕೀರ್ತನೆಗಳು ಮತ್ತು ಸಾಹಿತ್ಯದ ಮೂಲಕ ಜಾತಿಭೇದ, ಅಸಮಾನತೆ ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ, ಸಮಾನತೆ, ಸಹೋದರತ್ವ, ಮಾನವೀಯತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ ಎಂದು ತಿಳಿಸಿದ್ದಾರೆ.

ಕನಕದಾಸರ ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತೆ ಸೇರಿದಂತೆ ಹಲವು ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿವೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಯುವಜನತೆಗೆ ಉತ್ತಮ ಮಾರ್ಗದರ್ಶನ ನೀಡುವ ಶಕ್ತಿ ಹೊಂದಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಜಯಂತಿ ಆಚರಣೆಯನ್ನು ಕೇವಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದಕ್ಕೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕನಕದಾಸರ ಜೀವನ, ಸಾಹಿತ್ಯ, ಸಾಮಾಜಿಕ ಚಿಂತನೆ ಮತ್ತು ಸಮಾನತೆಯ ಸಂದೇಶ ಪರಿಚಯಿಸುವ ರೀತಿಯಲ್ಲಿ ಆಚರಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.

ಮನವಿಯಲ್ಲಿ ಪ್ರಮುಖವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಣೆಗೆ ನಿರ್ದೇಶನ ನೀಡಬೇಕು, ಶಾಲೆಗಳಲ್ಲಿ ಸುತ್ತೋಲೆ ಹೊರಡಿಸಬೇಕು, ಪದವಿ ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಯಂತಿ ಆಚರಣಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಗಿದೆ. ಹಾಗೆಯೇ ಭಾಷಣ, ಪ್ರಬಂಧ, ಗಾಯನ, ಕೀರ್ತನೆ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಕನಕದಾಸರ ಸಾಹಿತ್ಯ ಮತ್ತು ಸಮಾನತೆ ಕುರಿತು ಉಪನ್ಯಾಸಗಳನ್ನು ನಡೆಸಬೇಕು ಎಂದು ಬೇಡಿಕೆ ಇಡಲಾಗಿದೆ. ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆಚರಣೆಯ ಮೇಲ್ವಿಚಾರಣೆ ಮಾಡುವಂತೆ ಮತ್ತು ಎಲ್ಲಾ ಇಲಾಖೆಗಳು ಛಾಯಾಚಿತ್ರಗಳೊಂದಿಗೆ ಅನುಷ್ಠಾನ ವರದಿ ಸಲ್ಲಿಸುವಂತೆ ನಿರ್ದೇಶಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಭಕ್ತ ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಮಹಾನ್ ಸಂತರು ಅಲ್ಲ; ಅವರು ಇಡೀ ಕನ್ನಡ ನಾಡಿನ ಹೆಮ್ಮೆ ಹಾಗೂ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ. ಅವರ ಜಯಂತಿಯನ್ನು ಜಿಲ್ಲೆಯಾದ್ಯಂತ ಒಗ್ಗಟ್ಟಿನಿಂದ ಆಚರಿಸುವ ಮೂಲಕ ಸಾಮಾಜಿಕ ಸಾಮರಸ್ಯ, ಸಮಾನತೆ ಮತ್ತು ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಧಿಕೃತ ಆದೇಶ ಹಾಗೂ ಇಲಾಖಾವಾರು ಸುತ್ತೋಲೆ ಹೊರಡಿಸಿ, ಜಯಂತಿ ಆಚರಣೆಯ ಅನುಷ್ಠಾನ ಖಚಿತಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಅಂಬರೀಶ ಮಲ್ಲೇಶಿ ಮನವಿ ಮಾಡಿದ್ದಾರೆ.
📲Get App