🔥 TRENDING दिवाळीच्या प्रकाशात: डॉ. बाबासाहेब आंब... National Highway 'ਤੇ ਖੰਭੇ 'ਚ ਜਾ ਵੱਜੀ ਕ... চোপড়া ব্লকের হাপতিয়া গজ গ্রামে বিদ্য... पुलिस लाइन बलिया में दीपावली के रंगों... NH 66 Traffic Jam Persists as Flyovers... Revanth Reddy to Launch 'Praja Balam'...
09 Nov 2026•
ગુજરાતી मराठी ਪੰਜਾਬੀ বাংলা

ಅರಕೇರಾ ತಾಲೂಕಿಗೆ ಸೇರ್ಪಡೆಗೊಂಡ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒತ್ತಾಯ ### ಫಲಕನಮರಡಿ, ವಂದಲಿ, ಮೂಡಲಗುಂಡ, ಮದರಕಲ್, ದೇವರಗುಡ್ಡ ಹಾಗೂ ಊಟಿ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರಿಸಿ ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ *

✍️ Reporter: Khaja Hussain 🗓 09 Nov 2026, 02:13 PM 👁 12
Share: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ ಬ್ರೇಕಿಂಗ್ ನ್ಯೂಸ್**

# ಅರಕೇರಾ ತಾಲೂಕಿಗೆ ಸೇರ್ಪಡೆಗೊಂಡ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒತ್ತಾಯ

### ಫಲಕನಮರಡಿ, ವಂದಲಿ, ಮೂಡಲಗುಂಡ, ಮದರಕಲ್, ದೇವರಗುಡ್ಡ ಹಾಗೂ ಊಟಿ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರಿಸಿ ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

**ರಾಯಚೂರು, ನ. 9:** ಅರಕೇರಾ ತಾಲೂಕು ಕೇಂದ್ರಕ್ಕೆ ಸೇರ್ಪಡೆಗೊಳಿಸಿರುವ ಫಲಕನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂದಲಿ, ಫಲಕನಮರಡಿ, ಮೂಡಲಗುಂಡ, ಮದರಕಲ್, ದೇವರಗುಡ್ಡ ಹಾಗೂ ಊಟಿ ಗ್ರಾಮಗಳನ್ನು ಪುನಃ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಿ, ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ನವೆಂಬರ್ 6ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಅರಕೇರಾ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ರೂಪಿಸಲು ಅನುಮೋದನೆ ನೀಡಲಾಗಿದೆ. ಆದರೆ ಹೊಸ ತಾಲೂಕುಗಳ ರಚನೆ ಸಂದರ್ಭದಲ್ಲಿ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ಆಡಳಿತಾತ್ಮಕ ಅನುಕೂಲತೆ ಹಾಗೂ ಸಾರ್ವಜನಿಕರಿಗೆ ಕಂದಾಯ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳು ಸುಲಭವಾಗಿ ದೊರೆಯುವ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಅರಕೇರಾ ತಾಲೂಕು ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳು ಹಾಗೂ ತಾಲೂಕು ಕೇಂದ್ರಕ್ಕೆ ಇರಬೇಕಾದ ಆಡಳಿತಾತ್ಮಕ ವ್ಯವಸ್ಥೆಗಳ ಕೊರತೆಯಿದೆ. ಸಮರ್ಪಕವಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಏಕಪಕ್ಷೀಯವಾಗಿ ನಮ್ಮ ಗ್ರಾಮಗಳನ್ನು ಅರಕೇರಾ ತಾಲೂಕಿಗೆ ಸೇರ್ಪಡೆಗೊಳಿಸಿರುವುದು ಜನರಿಗೆ ಅನುಕೂಲವಾಗುವ ಬದಲು ತೊಂದರೆಯಾಗಿ ಪರಿಣಮಿಸಿದೆ ಎಂದು ಆರೋಪಿಸಿದ್ದಾರೆ.

ಈ ಗ್ರಾಮಗಳ ನಿವಾಸಿಗಳು ವ್ಯಾಪಾರ-ವಹಿವಾಟು, ಶಾಲಾ-ಕಾಲೇಜು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಾರಿಗೆ ವ್ಯವಸ್ಥೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಜಾಲಹಳ್ಳಿಯನ್ನೇ ಅವಲಂಬಿಸಿದ್ದಾರೆ. ಜಾಲಹಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಉತ್ತಮ ಸಾರಿಗೆ ಸಂಪರ್ಕವಿರುವುದರಿಂದ ಈ ಗ್ರಾಮಗಳನ್ನು ದೇವದುರ್ಗ ತಾಲೂಕು ಹಾಗೂ ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತವಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿಗಳ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ಅರಕೇರಾ ತಹಸೀಲ್ದಾರರಿಗೆ ಲಿಖಿತ ಆದೇಶ ನೀಡಿ, ಸಂಬಂಧಪಟ್ಟ ಗ್ರಾಮಗಳ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಈವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಪಟ್ಟ ಗ್ರಾಮಗಳ ನಿವಾಸಿಗಳಿಂದ ಪಾರದರ್ಶಕವಾಗಿ ಜನಾಭಿಪ್ರಾಯ ಸಂಗ್ರಹಿಸಲು ಆದೇಶಿಸಬೇಕು. ಜನರ ಅಭಿಪ್ರಾಯಕ್ಕೆ ಅನುಗುಣವಾಗಿ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಿ, ಜಾಲಹಳ್ಳಿ ಹೋಬಳಿಯಲ್ಲಿಯೇ ಮುಂದುವರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವೇಳೆ ಅಧಿಕಾರಿಗಳು ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

**ಈ ಸಂದರ್ಭದಲ್ಲಿ** ಫಲಕನಮರಡಿ ಗ್ರಾಮ ಪಂಚಾಯತ್ ವ್ಯಪ್ತಿಯ ಮುಖಂಡರು ಗಳಾದ ಸಿದ್ದನಗೌಡ, ಮೂಡಲಗುಂಡದ ಹನುಮಗೌಡ, ಮದರಕಲ್‌, ರಂಗಣ್ಣ ಕೊಲ್ಕರ್, ಶಿವರಾಜ್ ಮುಂಡರಗಿ, ಹುಸೇನ್ ಸಾಬ್ ಗಣಜಲಿ, ಮಲ್ಲಯ್ಯ ಕಟ್ಟಿಮನಿ ಸೇರಿದಂತೆ ಫಲಕನಮರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App