🔥 TRENDING Bengaluru Couple Relocates to Goa, Pay... रायबरेली में लौह पुरुष सरदार वल्लभभाई... Manipur Deputy CM Calls for Safe Relea... Two Militants Arrested Over Woman's Ki... Jharkhand High Court Rejects Kashish D... Nagaland's Youth Unemployment Hits 17....
31 Oct 2026•
ગુજરાતી मराठी ਪੰਜਾਬੀ বাংলা

ಹಿಂದೂಗಳೆಂದರೆ ಯಾರು? ದಲಿತರೆಂದರೆ ಯಾರು? ದನಗಳಿಗೆ ಸಿಕ್ಕ ಸ್ಥಾನ ದಲಿತರಿಗೆ ಏಕೆ ಸಿಗುತ್ತಿಲ್ಲ? - ರಾಯಚೂರು ಜಿಲ್ಲೆಯ ವಾಸ್ತವ ಚಿತ್ರಣದ ವಿಶ್ಲೇಷಣೆ

✍️ Reporter: Ningappa 🗓 31 Oct 2026, 11:49 AM 👁 19
Share: 💬 WhatsApp 📘 Facebook 𝕏 Post

ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಕಾರಣ ಜಾತಿವಾದ, ಬ್ರಾಹ್ಮಣವಾದವೇ ಎಂದು ಆರೋಪ - ಹೊಲೆ-ಮಾದಿಗರು ಒಂದಾಗಬೇಕು ಎಂದು ಆರ್.ಮಾನಸಯ್ಯ ಕರೆ

ಹಿಂದೂಗಳೆಂದರೆ ಯಾರು? ದಲಿತರು ಎಂದರೆ ಯಾರು? ದನಗಳಿಗೆ ಸಿಕ್ಕ ಸ್ಥಾನ ದಲಿತರಿಗೆ ಏಕೆ ಸಿಗುತ್ತಿಲ್ಲ?

ರಾಯಚೂರು ಜಿಲ್ಲೆಯಲ್ಲಿ ದಲಿತರ ಕೊಲೆಗಳು, ಅತ್ಯಾಚಾರಗಳು, ಅಸ್ಪೃಶ್ಯತೆ ಆಚರಣೆಗಳು, ಸಾಮಾಜಿಕ ಬಹಿಷ್ಕಾರಗಳು, ಅನಿಯಮಿತ ದಾಳಿಗಳು ವ್ಯವಸ್ಥಿತವಾಗಿ ಮುಂದುವರೆದಿವೆ. ಇದನ್ನು ದಲಿತರ ಮೇಲಿನ ಕೇವಲ ದಮನ ದಬ್ಬಾಳಿಕೆ ಎಂದು ಕರೆದರೆ ಅಪಅಂದಾಜಾಗುತ್ತದೆ. ಪರಿಣಾಮವು ಇದಕ್ಕಿಂತ ಘೋರವಾಗಿದೆ. ಇದಕ್ಕೆ ಕಾರಣ ಜಾತಿ ತಾರತಮ್ಯ ವ್ಯವಸ್ಥೆಯನ್ನು ಉಳಿಸುವುದು ಹಾಗೂ ದಲಿತರ ಕನಿಷ್ಠ ಏಳಿಗೆಯನ್ನು ಸಹಿಸದೆ ಇರುವುದು. ಇದೇ ಹಿಂದೂ ಸನಾತನವಾದವಾಗಿದೆ. ಇದರ ಇನ್ನೊಂದು ಹೆಸರು ಜಾತಿವಾದವಾಗಿದೆ. ಇದರ ಇನ್ನೊಂದು ಹೆಸರೇ ಬ್ರಾಹ್ಮಣವಾದವಾಗಿದೆ.

ಈ ಬ್ರಾಹ್ಮಣವಾದವು ಬ್ರಾಹ್ಮಣರಿದ್ದ ಹಾಗೂ ಇಲ್ಲದ ಬಹುತೇಕ ಹಳ್ಳಿಗಳನ್ನು ಆಳುತ್ತಿದೆ. ಉತ್ತರ ಕರ್ನಾಟಕದ ಶೂದ್ರ ವರ್ಣದ ಅಗ್ರ ಜಾತಿಗಳಾದ ವೀರಶೈವ, ರೆಡ್ಡಿ, ಬಣಜಿಗ, ಪಂಚಮಸಾಲಿ, ಜಂಗಮರು ಜಾತಿವಾದಿಗಳಾಗಿದ್ದಾರೆ.

ಅಲ್ಲದೆ, ಹಿಂದುಳಿದ ವರ್ಗದ ಜಾತಿಗಳು, ಪರಿಶಿಷ್ಟ ಪಂಗಡ (ST)ದ ಜನಾಂಗದವರೂ ಬಹುತೇಕ ದಲಿತರ ಮೇಲಿನ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಾಗಿರುತ್ತಾರೆ! ಏಕೆಂದರೆ, ಇವರಿಗೆ ಎಸ್ಸಿ ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅನ್ವಯಿಸುವುದಿಲ್ಲ ಎಂಬ ಭಾವನೆ ಇದೆ. ಇದು ರಾಜ್ಯವು ಸೇರಿದಂತೆ ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಸಾಮಾನ್ಯ ಚಿತ್ರಣವಾಗಿದೆ.

ದಕ್ಷಿಣದಲ್ಲಿ ಶೂದ್ರ ವರ್ಣದ ಒಕ್ಕಲಿಗರು, ಹಿಂದುಳಿದ ವರ್ಗದವರು ದಲಿತರ ಮೇಲೆ ದಾಳಿ ನಡೆಸಿ ಜಾತಿ ವ್ಯವಸ್ಥೆಯನ್ನು ಕಾಪಾಡುತ್ತಾರೆ. ಗ್ರಾಮೀಣ ಪ್ರದೇಶದ ಮುಸ್ಲಿಮರು ಜಾತಿವಾದಿಗಳೊಂದಿಗೆ ಸಹಜವಾಗಿ ಕೈಜೋಡಿಸುತ್ತಾರೆ. ಮತ್ತೊಂದು ಕಡೆ ಪಟ್ಟಣದ ಜಾತ್ಯತೀತ ಮುಸ್ಲಿಮರು ದಲಿತರ ಮೇಲಿನ ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರ ಪರವಾಗಿ ನಿಲ್ಲುವುದಿಲ್ಲ. ಅಪವಾದಕ್ಕೆ ಕೆಲವು ಪ್ರಕರಣಗಳಿವೆ. ಮುಸ್ಲಿಮರು, ಹಿಂದುಳಿದ ವರ್ಗದವರು ಹಾಗೂ ಅಲೆಮಾರಿ ಆದಿವಾಸಿಗಳ ಹಕ್ಕು ರಕ್ಷಣೆಗಾಗಿ ನಡೆಯುವ ಹೋರಾಟದಲ್ಲಿ ದಲಿತ ನಾಯಕರು ಮುಂದಿರುತ್ತಾರೆ.

ಆದರೆ, ದಲಿತರ ಹಕ್ಕು ರಕ್ಷಣೆ ಹೋರಾಟದಲ್ಲಿ, ದೌರ್ಜನ್ಯ ದಬ್ಬಾಳಿಕೆ ವಿರೋಧಿ ಪ್ರತಿಭಟನೆಗಳಲ್ಲಿ ದಲಿತರೊಂದಿಗೆ ಈ ಸಮುದಾಯದವರು ಇರುವುದಿಲ್ಲ. ಅಷ್ಟೇ ಏಕೆ ನುಡಿಗ ನೂರು ಬಾರಿ ದಲಿತರ ಬಗ್ಗೆ ಮಾತಾಡುವ, ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು ಸಂಸದರು ಸಚಿವರು ದಲಿತ ಹೋರಾಟದಲ್ಲಿ ಪಾಲ್ಗೊಳ್ಳುವುದಿಲ್ಲ.

ಅತ್ಯಂತ ಸೋಜಿಗದ ಮತ್ತೊಂದು ಸಂಗತಿ ಎಂದರೆ, ಪರಿಶಿಷ್ಟ ಜಾತಿಯ ಫಲಾನುಭವಿಗಳಾದ ಹಾಗೂ ಪರಿಶಿಷ್ಟರೇ ಎಂದು ಮೀಸಲಾತಿ ಉಣ್ಣುತ್ತಿರುವ ಭೋವಿ, ಲಂಬಾಣಿ, ಭಜಂತ್ರಿ ಜಾತಿಯವರೂ ಸಾಮಾಜಿಕ ಬಹಿಷ್ಕಾರದಲ್ಲಿ ಮೇಲ್ಜಾತಿಯ ಪರ ನಿಲ್ಲುತ್ತಾರೆ ವಿನಾ ದಲಿತರ ಪರವಾಗಿ ಅಲ್ಲ. ಮತ್ತು ತಮ್ಮನ್ನು ತಾವು ದಲಿತರೆಂದು ಎಂದೂ ಕರೆದುಕೊಳ್ಳುವುದಿಲ್ಲ.

ಹಾಗಾಗಿ, ಈಗ ಮತ್ತೊಮ್ಮೆ ಹೊಲೆ ಮಾದಿಗರು ಮಾತ್ರ ದಲಿತರಾಗಿದ್ದಾರೆ ಎಂದು ಕೂಗಿ ಹೇಳಬೇಕಾಗಿದೆ. ಏಕೆಂದರೆ ಇವರು ಅಸ್ಪೃಶ್ಯರಾಗಿದ್ದಾರೆ. ಇಂದು ಇವರ ಸಣ್ಣ ಏಳಿಗೆಯನ್ನು ಸಹಿಸಲು ಈ ಸಮಾಜದ ಮೇಲ್ಜಾತಿಗಳು ತಯಾರಿಲ್ಲ. ಇತ್ತೀಚಿಗೆ ಪ್ರಿಯಾಂಕ್ ಖರ್ಗೆ ಬಗ್ಗೆ ಕುಮಾರಸ್ವಾಮಿ ಆಡಿದ ಮಾತುಗಳು ಇದಕ್ಕೆ ನಿದರ್ಶನವಾಗಿವೆ.

ದಲಿತನೊಬ್ಬ ಗೃಹ ಖಾತೆ ಸಚಿವನಾಗಿರುವ ಸಂದರ್ಭದಲ್ಲಿಯೇ ದಲಿತರ ಮೇಲಿನ ಪ್ರಾಯೋಜಿತ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಇದಕ್ಕೆ ಕಾರಣ ಜಾತಿ ಆಧಾರಿತ ಸಮಾಜವಾಗಿದೆ. ಜಾತಿ ರಾಜಕಾರಣವಾಗಿದೆ. ಕೇವಲ ಗೃಹ ಮಂತ್ರಿ ಖರ್ಗೆಯವರಲ್ಲ; ಪೊಲೀಸ್ ಇಲಾಖೆಯ ಆಯಕಟ್ಟಿನ ಜಾಗದಲ್ಲಿರುವ ಜಾತಿವಾದಿ ಅಧಿಕಾರಶಾಹಿಗಳು, ಜಾತಿವಾದಿ ನ್ಯಾಯಾಧೀಶರು, ಜಾತಿವಾದಿ ವಕೀಲರು, ಜಾತಿವಾದಿ ಶಾಸಕ ಸಂಸದ ಸಚಿವರು! ಇದು ಇಂದು ರಾಜ್ಯ ಹಾಗೂ ರಾಯಚೂರು ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ವ್ಯವಸ್ಥಿತವಾಗಿ ಮುಂದುವರೆದಿದೆ.

ಇದನ್ನು ಚೆನ್ನಾಗಿ ಅರಿತುಕೊಂಡು ಮೊದಲು ಹೊಲೆ-ಮಾದಿಗರು ಒಂದಾಗಬೇಕಾಗಿದೆ. ನಿಜವಾದ ದಲಿತಪರ ಹಾಗೂ ಅಸ್ಪೃಶ್ಯತಾ ವಿರೋಧಿ ಶಕ್ತಿಗಳನ್ನು, ವ್ಯಕ್ತಿಗಳನ್ನು ಹುಡುಕಬೇಕಾಗಿದೆ. ಜಾತಿ ನಿರ್ಮೂಲನೆಗಾಗಿ ಮಿಡಿಯುವ ಮನಸ್ಸು ಊರಲ್ಲಿರಲಿ ಅಥವಾ ಕೇರಿಯಲ್ಲಿರಲಿ, ಅಗ್ರಹಾರದಲ್ಲಿ ಮೊಹಲ್ಲಾಗಳಲ್ಲಿರಲಿ ಅವರೊಂದಿಗೆ ಮೈತ್ರಿ ಸಾಧಿಸಬೇಕಾಗಿದೆ. ಒಟ್ಟಾರೆ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆಗೊಳಿಸುವ, ದಲಿತ ವಿಮೋಚನಾ ಚಳುವಳಿಯ ದಾರಿಯನ್ನು ಮರು ಪರಿಶೋಧನೆ ಮಾಡಬೇಕಾಗಿದೆ.

ಲೇಖಕರು: ಆರ್. ಮಾನಸಯ್ಯ, ಸಿಪಿಐ (ಎಂಎಲ್) ರೆಡ್ ಸ್ಟಾರ್
📲Get App