🔥 TRENDING આ નિયમિત માસિક ડિવોલ્યુશન અને આ નાણાકી... કેનસરના દર્દી માટે સહાયની વિનંતી Dc office budgam Observes Rashtriya Ek... घाटना के विरोध में कॉलोनी वासियों ने प... घाटना के विरोध में कॉलोनी वासियों ने प... थाना सेक्टर-58 पुलिस द्वारा चोरी/स्नेच...
31 Oct 2026•
ગુજરાતી मराठी ਪੰਜਾਬੀ বাংলা

ಬೆಳೆಗಳ ರಕ್ಷಣೆಗೆ ಜನವರಿವರೆಗೆ ಕಾಲುವೆ ನೀರು ಹರಿಸಲು ಆಗ್ರಹ: ಶಾಸಕಿ ಕರೆಮ್ಮ ಜಿ. ನಾಯಕ

✍️ Reporter: Khaja Hussain 🗓 31 Oct 2026, 09:26 PM 👁 14
Share: 💬 WhatsApp 📘 Facebook 𝕏 Post
**ದೇವದುರ್ಗ | ಬ್ರೇಕಿಂಗ್ ನ್ಯೂಸ್**

# ಬೆಳೆಗಳ ರಕ್ಷಣೆಗೆ ಜನವರಿವರೆಗೆ ಕಾಲುವೆ ನೀರು ಹರಿಸಲು ಆಗ್ರಹ: ಶಾಸಕಿ ಕರೆಮ್ಮ ಜಿ. ನಾಯಕ

### ನ. 16ರಂದು ಸಿರವಾರ ಕ್ರಾಸ್ ಬಳಿ ಜೆಡಿಎಸ್‌ನಿಂದ ಬೃಹತ್ ರ್ಯಾಲಿ, ರಸ್ತೆ ತಡೆ ಪ್ರತಿಭಟನೆ: ಸರ್ಕಾರಕ್ಕೆ ಎಚ್ಚರಿಕೆ

**ದೇವದುರ್ಗ, ಅ. 31:** ನಾರಾಯಣಪುರ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದಿರುವ ಬೆಳೆಗಳಿಗೆ ನೀರಿನ ಅಭಾವ ಎದುರಾಗಿದ್ದು, ರೈತರ ಪರಿಸ್ಥಿತಿ ಗಂಭೀರವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ಹೀಗಾಗಿ ಜನವರಿ ತಿಂಗಳವರೆಗೆ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನವೆಂಬರ್ 16ರಂದು ಸಿರವಾರ ಕ್ರಾಸ್ ಬಳಿ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ರ್ಯಾಲಿ ಹಾಗೂ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಂಗಾರು ಬೆಳೆಗಳ ರಕ್ಷಣೆಗೆ ಅಗತ್ಯ ಪ್ರಮಾಣದ ನೀರು ಹರಿಸುವ ಭರವಸೆ ನೀಡಲಾಗಿತ್ತು. ಆದರೆ, ನವೆಂಬರ್ 12ರಿಂದಲೇ ಕಾಲುವೆಗೆ ನೀರು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಹಾಗೂ 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಹತ್ತಿ ಬೆಳೆ ಕಟಾವಿನ ಹಂತದಲ್ಲಿದ್ದರೆ, ಭತ್ತದ ಬೆಳೆಗೆ ಕನಿಷ್ಠ ಡಿಸೆಂಬರ್ ತಿಂಗಳವರೆಗೆ ನೀರಿನ ಅವಶ್ಯಕತೆಯಿದೆ. ಮೆಣಸಿನಕಾಯಿ ಬೆಳೆಗೆ ಜನವರಿವರೆಗೂ ನೀರು ಅತ್ಯಗತ್ಯವಾಗಿದೆ ಎಂದು ವಿವರಿಸಿದರು.

ಮೆಣಸಿನಕಾಯಿ ಬೆಳೆಯಲು ರೈತರು ಪ್ರತಿ ಎಕರೆಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚ ಮಾಡಿದ್ದು, ಕೆಲವರು 10ರಿಂದ 20 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಬೆಳೆ ಬೆಳೆದಿದ್ದಾರೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಫಸಲು ಬರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ನೀರಿನ ಕೊರತೆ ಉಂಟಾದರೆ ರೈತರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಾಧ್ಯತೆಯಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಪಕ್ಷ ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 7ರಿಂದ 11ರವರೆಗೆ 11 ಕಡೆಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರೊಂದಿಗೆ ಸಭೆಗಳನ್ನು ಆಯೋಜಿಸಲಾಗಿದೆ. ರೈತರ ಸಮಸ್ಯೆಗಳು ಹಾಗೂ ಬೆಳೆಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದರು.

ಈಗಾಗಲೇ ನೀರಿನ ಅಗತ್ಯತೆ ಮತ್ತು ಸಂಭವಿಸಬಹುದಾದ ಬೆಳೆಹಾನಿಯ ಕುರಿತು ಮಾಹಿತಿ ನೀಡುವಂತೆ ನೀರಾವರಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ವಾರದೊಳಗೆ ವರದಿ ಸಲ್ಲಿಸಲಿದ್ದಾರೆ. ರೈತರಿಂದ ಸಂಗ್ರಹಿಸಿದ ಮಾಹಿತಿ ಹಾಗೂ ಅಧಿಕಾರಿಗಳ ವರದಿಯನ್ನು ಆಧರಿಸಿ ನೀರಾವರಿ ಸಲಹಾ ಸಮಿತಿ ಸಭೆ ಮತ್ತು ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬುದನ್ನು ಮುಖ್ಯಮಂತ್ರಿಗಳೇ ತಮ್ಮ ಹೇಳಿಕೆಗಳ ಮೂಲಕ ಒಪ್ಪಿಕೊಂಡಿದ್ದಾರೆ. ಬರಗಾಲ ಘೋಷಣೆ ಮಾಡಲಾಗಿದೆಯೇ ಹೊರತು, ರೈತರಿಗೆ ಪರಿಹಾರ ಹಾಗೂ ಇತರೆ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇಂತಹ ಅಧೋಗತಿಯ ಸರ್ಕಾರವನ್ನು ರಾಜ್ಯ ಹಿಂದೆಂದೂ ಕಂಡಿರಲಿಲ್ಲ ಎಂದು ಶಾಸಕಿ ಕರೆಮ್ಮ ಜಿ. ನಾಯಕ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ, ಅರಕೇರಾ ತಾಲೂಕು ಅಧ್ಯಕ್ಷ ಸಿದ್ದಣ್ಣ ಬಿ. ಗಣೇಕಲ್, ಮುಖಂಡರಾದ ಶರಣಪ್ಪ ಬಳೆ, ಅಮರೇಶ ಪಾಟೀಲ್ ಪರ್ತಪೂರ, ಹನುಮಂತ್ರಾಯ ನಾಯಕ ಚಿಂತಲಕುಂಟಿ, ಚನ್ನಪ್ಪ ಮಸೀದಪೂರ, ಶಿಖರೇಶ ಪಾಟೀಲ್, ನಾಗರಾಜ ಪಾಟೀಲ್, ಗೋವಿಂದರಾಜ ನಾಯಕ, ಶಾಲಂ ಉದ್ದಾರ, ಶಾಂತಕುಮಾರ ಗೋಪಾಳಪೂರ, ಶರಣಗೌಡ, ಚನ್ನಮ್ಮ ವಾಚಾನಾಯ್ಕ ತಾಂಡ ಹಾಗೂ ರಮೇಶ ರಾಮನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App