🔥 TRENDING Eight arrested as armed gang celebrate... Fruit Vendor Dies in Road Accident 26-Year-Old Woman Killed in Hyderabad... Road Safety Experts Call on City Drive... Kajol Shares Heartfelt Birthday Messag... Belmont Cameli, Nicole Kidman, Brad Pi...
14 Sep 2026
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ

✍️ Reporter: Khajahussain baba Jalahalli 🗓 14 Sep 2026, 06:22 AM 👁 36
Share: 💬 WhatsApp 📘 Facebook 𝕏 Post
.

📰 ಜಾಲಹಳ್ಳಿ–ದೇವದುರ್ಗ | ಬ್ರೇಕಿಂಗ್ ನ್ಯೂಸ್

ಜಾಲಹಳ್ಳಿಯಲ್ಲಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ

ಶ್ರೀಮಠದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಾಣ ಮಹಾಮಂಗಲ ಹಾಗೂ ಧರ್ಮ ಚಿಂತನ ಗೋಷ್ಠಿ ಸಂಪನ್ನ

ಜಾಲಹಳ್ಳಿ, ಸೆ.13: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಜಗದ್ಗುರು ಜಯಶಾಂತಲಿಂಗೇಶ್ವರ ಶ್ರೀಮಠದಲ್ಲಿ ಸೆ.12ರಂದು ಪ್ರತಿವರ್ಷದ ಸಂಪ್ರದಾಯದಂತೆ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವದ ಅಂಗವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಾಣ ಮಹಾಮಂಗಲ ಹಾಗೂ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಬೆಳಿಗ್ಗೆ ಶ್ರೀಮಠದಿಂದ ಜಯಶಾಂತಲಿಂಗೇಶ್ವರರ ರಜತ ವಿಗ್ರಹವನ್ನು ಪುಷ್ಪಾಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ತಪೋಧಾಮದವರೆಗೆ ಮೆರವಣಿಗೆ ನಡೆಸಲಾಯಿತು. ಪರಮಪೂಜ್ಯ ಜಗದ್ಗುರು ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಓಂಕಾರ ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಾಲಹಳ್ಳಿ ಗ್ರಾಮದ ವತನದಾರರಾದ ರಾಜರಂಗಪ್ಪ ನಾಯಕ, ಕೊಪ್ರೇಶ ರಾವ್ ದೇಸಾಯಿ, ಶರಣಗೌಡ ಪೊಲೀಸ್ ಪಾಟೀಲ, ಅಮರೇಗೌಡ ಮಾಲಿಪಾಟೀಲ ಹಾಗೂ ಪ್ರಭಾಕರ ಕುಲಕರ್ಣಿ ಅವರು ಜ್ಯೋತಿ ಬೆಳಗಿಸಿ ಅಡ್ಡಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು.

ಸಾಯಂಕಾಲ ಪುರಾಣ ಮಹಾಮಂಗಲದೊಂದಿಗೆ ಧರ್ಮ ಚಿಂತನ ಗೋಷ್ಠಿ ನಡೆಯಿತು. ದೇವದುರ್ಗದ ಶ್ರೀ ಅಭಿನವ ಗಂಗಾಧರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಉದ್ಘಾಟಕರಾಗಿ ಪಾಲ್ಗೊಂಡರು. ನವಲಕಲ್ ಹಿರೇಮಠದ ಶ್ರೀ ಸೋಮನಾಥ ಶಿವಾಚಾರ್ಯರು ಧರ್ಮೋಪದೇಶ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಬಿ.ವಿ. ನಾಯಕ, ವೀರಶೈವ ಸಮಾಜದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಮಾಜಿ ಎಪಿಎಂಸಿ ಅಧ್ಯಕ್ಷ ಅದನಗೌಡ ಪಾಟೀಲ, ತಾಲೂಕು ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ಶಿಖರೇಶ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಣ್ಣ ಇರಬಗೇರಾ, ಮಾಜಿ ಜಿ.ಪಂ. ಸದಸ್ಯ ಫಕೀರಗೌಡ ಮಾನವಿ, ದೇವದುರ್ಗದ ರಾಜಕೀಯ ಮುಖಂಡ ಎ. ಮಲ್ಲಿಕಾರ್ಜುನ ಪಾಟೀಲ, ಹುಣಸಗಿಯ ರಾಜಕೀಯ ಮುಖಂಡ ನಿಂಗಣ್ಣ ಬಳಿಸಾಹು, ಜಿ.ಪಂ. ಸದಸ್ಯ ಬಸವರಾಜ ಸ್ಥಾವರಮಠ, ಉದ್ಯಮಿ ನಿಖಿಲ್ ಹೆಗಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ ನಾಯಕ, ಪರಿಶಿಷ್ಟ ಪಂಗಡ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ ಬಿಕ್ರಿ, ಮೂಡಲಗುಂಡದ ರಾಜಕೀಯ ಮುಖಂಡ ಸಿದ್ಧನಗೌಡ, ಗಣೇಕಲ್‌ನ ಶರಣಗೌಡ ಮಾಲಿಪಾಟೀಲ, ಮಲ್ಲಣ್ಣ ಸಾಹುಕಾರ ನಾಗರಾಳ, ಜಾಲಹಳ್ಳಿ ಪಿಎಸ್‌ಐ ವೈಶಾಲಿ ಜಳಕಿ, ಉದ್ಯಮಿ ವಿದ್ಯಾನಂದ ದೇಸಾಯಿ ಬಾಗಲಕೋಟೆ, ಕೋಟ್ರೇಶಪ್ಪ ಕೋರಿ ಹಾಗೂ ಡಾ. ನಾಗರಾಜ ಬಾಲ್ಕಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೂರದರ್ಶನ ಬಾಗಲಕೋಟೆಯ ಹಾಸ್ಯ ಕಲಾವಿದೆ ಶ್ರೀಮತಿ ಇಂದುಮತಿ ಸಾಲಿಮಠ ಅವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡಿ, ತಮ್ಮ ಜೀವನಾನುಭವಗಳನ್ನು ಹಂಚಿಕೊಂಡು ಸಭಿಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಜಾಲಹಳ್ಳಿ ಧರ್ಮಪ್ರಭುಗಳು ಆಶೀರ್ವಚನ ನೀಡಿ, ಭಾರತೀಯ ಧರ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದರಿಂದ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಬೆಳೆದು, ಆತ್ಮರಕ್ಷಣೆ ಹಾಗೂ ಸಮಾಜದ ಒಳಿತಿಗೆ ಪ್ರತಿಯೊಬ್ಬರೂ ಸಮರ್ಥರಾಗುತ್ತಾರೆ. ಧರ್ಮ, ಸಂಸ್ಕೃತಿ ಹಾಗೂ ಧರ್ಮಗುರುಗಳ ಮಾರ್ಗದರ್ಶನವನ್ನು ಗೌರವದಿಂದ ಪಾಲಿಸುವುದು ಅಗತ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ವೈದ್ಯಕೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ. ಬಸವರಾಜ್ ಎಂ. ಪಾಟೀಲ, ಜಿಲ್ಲಾ ಮಟ್ಟದ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ಸುರೇಶಗೌಡ ಮಡಬಾಳ ಹಾಗೂ ತಾಲೂಕು ಮಟ್ಟದ ಅತ್ಯುತ್ತಮ ವರದಿಗಾರ ಪ್ರಶಸ್ತಿ ಪುರಸ್ಕೃತ ಮಾನೇಶ್ ಜಾಲಹಳ್ಳಿ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.

ಪುರಾಣಿಕರು, ತಬಲಾ ವಾದಕರು ಹಾಗೂ ಸಂಗೀತಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಸಂಗಯ್ಯ ಗಣಾಚಾರಿ ಹಾಗೂ ಶ್ರೀ ಸಂಗನಬಸಯ್ಯ ಹಿರೇಮಠ ಪರಿವಾರದ ವತಿಯಿಂದ ಜಾಲಹಳ್ಳಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೂಜ್ಯರು ಹಾಗೂ ಗಣ್ಯರನ್ನು ಶ್ರೀ ಶ್ರೀಧರ ಹಿರೇಮಠ ಅವರು ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಜಿ. ನಾಯಕ, ಶಿಕ್ಷಕಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App