🔥 ट्रेंडिंग वाराणसी के निवर्तमान पुलिस आयुक्त को त... प्रतापगढ़ में फूड सेफ्टी विभाग ने नकली... मलकानगिरी में शांति और विकास को लेकर उ... హైదరాబాద్‌లో నకిలీ వాహన చలాన్ మెసేజ్‌ల... प्रकाशमय मेहंदवास , सरपंच रुकमणी प्रका... बिलोची के पास चौंप पुलिया से ट्रेलर की...
29 नव. 2026•
ગુજરાતી मराठी ਪੰਜਾਬੀ বাংলা

ವಕ್ಫ್ ಆಸ್ತಿ ರಕ್ಷಣೆ, ಆಸ್ಪತ್ರೆಗಳ ಅವ್ಯವಸ್ಥೆ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ AIMIM ಆಗ್ರಹಅಲ್ಪಸಂಖ್ಯಾತರ ಸಾಲ ಮನ್ನಾ, ಈದ್ಗಾ ಮೈದಾನಕ್ಕೆ ಅಧಿಕೃತ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ

✍️ रिपोर्टर: Khaja Hussain 🗓 29 नव. 2026, 09:38 PM 👁 26
शेयर करें: 💬 WhatsApp 📘 Facebook 𝕏 Post
**ರಾಯಚೂರು ಬ್ರೇಕಿಂಗ್ ನ್ಯೂಸ್**

# ವಕ್ಫ್ ಆಸ್ತಿ ರಕ್ಷಣೆ, ಆಸ್ಪತ್ರೆಗಳ ಅವ್ಯವಸ್ಥೆ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ AIMIM ಆಗ್ರಹ

### ಅಲ್ಪಸಂಖ್ಯಾತರ ಸಾಲ ಮನ್ನಾ, ಈದ್ಗಾ ಮೈದಾನಕ್ಕೆ ಅಧಿಕೃತ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ

**ರಾಯಚೂರು, ನ.29:** ವಕ್ಫ್ ಆಸ್ತಿಗಳ ಸಂರಕ್ಷಣೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ನಿವಾರಣೆ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ, ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ಹಾಗೂ ಅಲ್ಪಸಂಖ್ಯಾತರ ಸಾಲ ಮನ್ನಾ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ರಾಯಚೂರು ನಗರ ಘಟಕದ ವತಿಯಿಂದ ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

AIMIM ರಾಯಚೂರು ನಗರಾಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಒಂಬತ್ತು ಪುಟಗಳ ಮನವಿ ಪತ್ರದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.

ರಾಯಚೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಅಧ್ಯಕ್ಷರನ್ನು ತಕ್ಷಣ ನೇಮಕ ಮಾಡಬೇಕು. ಈ ಕುರಿತು ಸೆ.21, 2026ರಂದು ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಕ್ಫ್ ಆಸ್ತಿಗಳ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆಗೆ ಅಧ್ಯಕ್ಷರ ನೇಮಕ ಅಗತ್ಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಕ್ಫ್ ಸಂಸ್ಥೆಗಳ ವಾಣಿಜ್ಯ ಮಳಿಗೆಗಳ ನೈಜ ಬಾಡಿಗೆ ಮೊತ್ತವನ್ನು ಮರೆಮಾಚಿ, ದಾಖಲೆಗಳಲ್ಲಿ ಕಡಿಮೆ ಬಾಡಿಗೆ ತೋರಿಸಿ ಹೆಚ್ಚುವರಿ ಹಣ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿನ ವಕ್ಫ್ ಆಸ್ತಿಗಳ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ ಆಸ್ತಿಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹15 ಸಾವಿರ ಮಾಸಿಕ ಸ್ಥಿರ ವೇತನ, ಇಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಬೇಕು. ಘೋಷಿತ ₹10 ಸಾವಿರ ಗೌರವಧನ, ಹೆಚ್ಚುವರಿ ಕೆಲಸಗಳಿಗೆ ಪ್ರೋತ್ಸಾಹಧನ, ಅನಾರೋಗ್ಯದ ಸಂದರ್ಭದಲ್ಲಿ ವೇತನ ಸಹಿತ ರಜೆ ಹಾಗೂ ಮಾಸಿಕ ರಜೆ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 32,274 ಹುದ್ದೆಗಳು ಹಾಗೂ ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ 277 ಹುದ್ದೆಗಳನ್ನು ಭರ್ತಿ ಮಾಡಬೇಕು. ರಿಮ್ಸ್, ಒಪೆಕ್ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಬೇಕು. ಹೊರಗುತ್ತಿಗೆ ನೌಕರರ ಸಮಸ್ಯೆ ಪರಿಹರಿಸಬೇಕು. ರಾತ್ರಿ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಲಭ್ಯತೆ ಖಚಿತಪಡಿಸಬೇಕು. ಕಮಿಷನ್ ಆಸೆಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ರಾಯಚೂರು ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಈದ್ಗಾ ಮೈದಾನಕ್ಕೆ ಸರ್ಕಾರಿ ದಾಖಲೆಗಳಲ್ಲಿ ಅಧಿಕೃತ ಮಾನ್ಯತೆ ನೀಡಬೇಕು. ಕಂದಾಯ ಇಲಾಖೆ ಹಾಗೂ ನಗರಸಭೆಯ ದಾಖಲೆಗಳಲ್ಲಿ 'ಈದ್ಗಾ ಮೈದಾನ' ಎಂದು ನಮೂದಿಸುವ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಇದಲ್ಲದೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಶ್ರಮಶಕ್ತಿ, ಸ್ವಯಂ ಉದ್ಯೋಗ, ಮೈಕ್ರೋ ಹಾಗೂ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡಬೇಕು. 2013ರಿಂದ 2019-20ರ ಅವಧಿಯಲ್ಲಿ ಪಡೆದ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ಬಡ ಸಾಲಗಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಾಲ ವಸೂಲಾತಿ ಆದೇಶವನ್ನು ತಡೆಹಿಡಿದು ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.

ರಾಜ್ಯ ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ತಕ್ಷಣ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು AIMIM ರಾಯಚೂರು ನಗರ ಘಟಕದ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ
ತನ್ವೀರ್ ಅಹ್ಮದ್ ಖಾನ್,ಮೊಹಮ್ಮದ್ ಅಲಿಮ್, ಸೈಯದ್ ಮಹಾದ್, ಮೊಹಮ್ಮದ್ ಅವೈಜ್ ಉಪಸ್ಥಿತರಿದ್ದರು

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App