🔥 ट्रेंडिंग 24 नवंबर को प्रदेश सचिव जितेंद्र पटेल... ડાકોર ફાગવેલ જતા પદયાત્રીઓ માટે ની 24... വിലക്കയറ്റം നിയന്ത്രിക്കാന്‍ സര്‍ക്കാര... नारौली डांग में धूमधाम से हुआ भगवान शा... ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವಕ್ಕೆ ಶ್... अरवल पुलिस ने ऑपरेशन मुस्कान के तहत शन...
21 नव. 2026•
ગુજરાતી मराठी ਪੰਜਾਬੀ বাংলা

ನ.25ರಂದು ರಾಯಚೂರು ಜಿಲ್ಲಾದ್ಯಂತ ಬೃಹತ್ ರಕ್ತದಾನ ಶಿಬಿರ - 5 ಸಾವಿರ ಯುನಿಟ್ ರಕ್ತ ಸಂಗ್ರಹ ಗುರಿ - ಡಾ. ನಂದಿತಾ ಎಂ.ಎನ್ ಕರೆ - ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ 6 ಕೇಂದ್ರಗಳಲ್ಲಿ ಶಿಬಿರ

✍️ रिपोर्टर: Ningappa 🗓 21 नव. 2026, 05:07 PM 👁 32
शेयर करें: 💬 WhatsApp 📘 Facebook 𝕏 Post

ನ.25ರಂದು ರಾಯಚೂರು ಜಿಲ್ಲಾದ್ಯಂತ ಬೃಹತ್ ರಕ್ತದಾನ ಶಿಬಿರ - 5 ಸಾವಿರ ಯುನಿಟ್ ರಕ್ತ ಸಂಗ್ರಹ ಗುರಿ - ಡಾ. ನಂದಿತಾ ಎಂ.ಎನ್ ಕರೆ - ರಾಯಚೂರು, ದೇವದುರ್ಗ, ಸಿಂಧನೂರು, ಲಿಂಗಸುಗೂರು, ಹಟ್ಟಿಯಲ್ಲಿ ಶಿಬಿರಗಳು - ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ರಕ್ತದಾನ - ಮಾನವೀಯತೆಯ ಒಂದು ಹನಿ ರಕ್ತ ನೀಡಿ, ಜೀವ ಉಳಿಸಿ - ಒಬ್ಬರ ರಕ್ತದಿಂದ ಮೂವರು ರೋಗಿಗಳಿಗೆ ನೆರವು

ನ.25ರಂದು ರಾಯಚೂರು ಜಿಲ್ಲಾದ್ಯಂತ ಬೃಹತ್ ರಕ್ತದಾನ ಶಿಬಿರ - 5 ಸಾವಿರ ಯುನಿಟ್ ರಕ್ತ ಸಂಗ್ರಹ ಗುರಿ

ರಾಯಚೂರು, ನ.20: ಜಿಲ್ಲೆಯಲ್ಲಿ ನವೆಂಬರ್ 25ರಂದು ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಒಂದೇ ದಿನ 5 ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಯುವಕರು, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್), ಜಿಲ್ಲೆಯ ರಕ್ತನಿಧಿ ಕೇಂದ್ರಗಳು, ರೆಡ್ ರಿಬ್ಬನ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜನಪ್ರತಿನಿಧಿಗಳ ಮಾರ್ಗದರ್ಶನದೊಂದಿಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರು, ಹೆರಿಗೆ ಸಂದರ್ಭದಲ್ಲಿ ಅಧಿಕ ರಕ್ತಸ್ರಾವಕ್ಕೆ ಒಳಗಾಗುವ ಮಹಿಳೆಯರು, ತೀವ್ರ ರಕ್ತಹೀನತೆಯಿಂದ ಬಳಲುವವರು, ಥಲಸ್ಸೀಮಿಯಾ ಹಾಗೂ ರಕ್ತ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರೆಯುವುದು ಅತ್ಯಂತ ಅಗತ್ಯವಾಗಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸೇವೆ ಅನೇಕ ಜೀವಗಳನ್ನು ಉಳಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

ನವೆಂಬರ್ 25ರಂದು ರಾಯಚೂರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ವೀರಶೈವ ಕಲ್ಯಾಣ ಮಂಟಪ, ದೇವದುರ್ಗದ ಜಾಲಹಳ್ಳಿ ರಸ್ತೆಯಲ್ಲಿರುವ ದೇವದುರ್ಗ ರಕ್ತನಿಧಿ ಕೇಂದ್ರ, ಸಿಂಧನೂರಿನ ಜನತಾ ಕಾಲೋನಿಯ ಶಾದಿ ಮಹಲ್ ಹಾಗೂ ಸಂಕೇತ ಪದವಿ ಕಾಲೇಜು, ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಹಟ್ಟಿಯ ಚಿನ್ನದ ಗಣಿ ಆಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರಗಳು ನಡೆಯಲಿವೆ.

ಎಲ್ಲ ಕೇಂದ್ರಗಳಲ್ಲಿಯೂ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸ್ವಯಂಪ್ರೇರಿತ ರಕ್ತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಮೀಪದ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡುವಂತೆ ಡಾ. ನಂದಿತಾ ಮನವಿ ಮಾಡಿದ್ದಾರೆ.

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ತುರ್ತು ಚಿಕಿತ್ಸೆಗೆ ಅಗತ್ಯವಿರುವ ರಕ್ತಕ್ಕಾಗಿ ಸ್ವಯಂಪ್ರೇರಿತ ದಾನಿಗಳನ್ನೇ ಅವಲಂಬಿಸಬೇಕಾಗಿದೆ. ‘ಮಾನವೀಯತೆಯ ಒಂದು ಹನಿ ರಕ್ತ ನೀಡಿ, ಜೀವ ಉಳಿಸಿ’ ಎಂಬ ಸಂದೇಶದೊಂದಿಗೆ ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರೋಗ್ಯವಂತ 18ರಿಂದ 65 ವರ್ಷದೊಳಗಿನ ವ್ಯಕ್ತಿಗಳು ವೈದ್ಯಕೀಯ ಅರ್ಹತಾ ತಪಾಸಣೆಗೆ ಒಳಪಟ್ಟು ರಕ್ತದಾನ ಮಾಡಬಹುದು. ರಕ್ತದಾನಿಯ ತೂಕ, ಹಿಮೋಗ್ಲೋಬಿನ್ ಪ್ರಮಾಣ, ರಕ್ತದೊತ್ತಡ ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ರಕ್ತದಾನಕ್ಕೆ ಅವಕಾಶ ನೀಡಲಾಗುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳಿರುವವರು ವೈದ್ಯಕೀಯ ಸಿಬ್ಬಂದಿಯ ಸಲಹೆ ಪಡೆಯಬೇಕು ಎಂದು ಹೇಳಿದ್ದಾರೆ.

ದಾನ ಮಾಡಿದ ರಕ್ತವನ್ನು ಕೆಂಪು ರಕ್ತಕಣಗಳು, ಪ್ಲೇಟ್‌ಲೆಟ್‌ಗಳು ಹಾಗೂ ಪ್ಲಾಸ್ಮಾ ಎಂಬ ಘಟಕಗಳಾಗಿ ಬೇರ್ಪಡಿಸಿ ಅಗತ್ಯವಿರುವ ವಿವಿಧ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಕೆಂಪು ರಕ್ತಕಣಗಳನ್ನು ತೀವ್ರ ರಕ್ತಹೀನತೆ, ಅಪಘಾತ ಹಾಗೂ ಹೆರಿಗೆ ಸಂದರ್ಭದ ರಕ್ತಸ್ರಾವದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಪ್ಲೇಟ್‌ಲೆಟ್‌ಗಳು ಡೆಂಗ್ಯೂ, ಕ್ಯಾನ್ಸರ್ ಹಾಗೂ ಕೀಮೋಥೆರಪಿ ಚಿಕಿತ್ಸೆಯ ಕೆಲವು ಸಂದರ್ಭಗಳಲ್ಲಿ ಅಗತ್ಯವಾಗುತ್ತವೆ. ಪ್ಲಾಸ್ಮಾವನ್ನು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳು ಸೇರಿದಂತೆ ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ.

ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ಗರಿಷ್ಠ ಮೂವರು ರೋಗಿಗಳಿಗೆ ನೆರವಾಗುವ ಸಾಧ್ಯತೆಯಿದೆ. ರಕ್ತದಾನವು ಕೇವಲ ವೈದ್ಯಕೀಯ ಪ್ರಕ್ರಿಯೆಯಲ್ಲ, ಮಾನವೀಯತೆ, ಸಹಾನುಭೂತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ. ಆರೋಗ್ಯವಂತ ನಾಗರಿಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಸಹಕರಿಸಬೇಕು ಎಂದು ಡಾ. ನಂದಿತಾ ಎಂ.ಎನ್. ಕರೆ ನೀಡಿದ್ದಾರೆ.
📲Get App