🔥 TRENDING Bisleri pulls West Bengal water batch... INDIA Alliance Holds Press Conference... Bisleri requests FSSAI review of West... Bihar, UP and Haryana Record Over 12%... सिकंदराराऊ मंडी के पास अज्ञात बोलेरो न... जिला अधिकारी ने बलिया में छात्र अनशन स...
28 Nov 2026•
ગુજરાતી मराठी ਪੰਜਾਬੀ বাংলা
National

ಅಮಲಾಪೂರ ಗ್ರಾಮದ ಜಮೀನು ವಿವಾದ: ಉಳಿದ 2 ಎಕರೆ 38 ಗುಂಟೆ ಜಮೀನು ಫಲಾನುಭವಿಗೆ ಹಂಚಿಕೆಯಾಗಲಿ

✍️ Reporter: Basavaraj pujari 🗓 28 Nov 2026, 02:35 PM 👁 25
Share: 💬 WhatsApp 📘 Facebook 𝕏 Post

ಅಧಿಕಾರಿಗಳ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ; ಬದುಕಲು ಬಿಡಿ ಎಂದು ಅಂಬಾದಾಸ ಸೈನೆ ಮನವಿ ಬೀದರ್: ಅಮಲಾಪೂರ ಗ್ರಾಮದ ಸರ್ವೆ ನಂ. 71ರಲ್ಲಿ ಲ್ಯಾಂಡ್ ಗ್ರಾಂಟ್ ಕಮಿಟಿಯಿಂದ ಮಂಜೂರಾದ 4 ಎಕರೆ 38 ಗುಂಟೆ ಜಮೀನಿನಲ್ಲಿ

ಅಮಲಾಪೂರ ಗ್ರಾಮದ ಜಮೀನು ವಿವಾದ: ಉಳಿದ 2 ಎಕರೆ 38 ಗುಂಟೆ ಜಮೀನು ಫಲಾನುಭವಿಗೆ ಹಂಚಿಕೆಯಾಗಲಿ
ಅಧಿಕಾರಿಗಳ ಮೂಲಕ ಮಾನಸಿಕ ಕಿರುಕುಳ ನೀಡಲಾಗುತ್ತಿದೆ; ಬದುಕಲು ಬಿಡಿ ಎಂದು ಅಂಬಾದಾಸ ಸೈನೆ ಮನವಿ

ಬೀದರ್: ಅಮಲಾಪೂರ ಗ್ರಾಮದ ಸರ್ವೆ ನಂ. 71ರಲ್ಲಿ ಲ್ಯಾಂಡ್ ಗ್ರಾಂಟ್ ಕಮಿಟಿಯಿಂದ ಮಂಜೂರಾದ 4 ಎಕರೆ 38 ಗುಂಟೆ ಜಮೀನಿನಲ್ಲಿ ಸ್ಮಶಾನ ಭೂಮಿಗಾಗಿ 2 ಎಕರೆ ಜಮೀನು ಸರ್ವೆ ಮಾಡಿಸಿ ನೀಡಲಾಗಿದ್ದು, ಉಳಿದ 2 ಎಕರೆ 38 ಗುಂಟೆ ಜಮೀನನ್ನು ಫಲಾನುಭವಿಗೆ ಹಂಚಿಕೆ ಮಾಡಬೇಕು ಎಂದು ಸಂತ್ರಸ್ತ ಅಂಬಾದಾಸ ಸೈನೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಮ್ಮ ತಂದೆ ತುಕ್ಕಪ್ಪ ತಂದೆ ಲಾಲಪ್ಪ ಅವರಿಗೆ 1993-94ನೇ ಸಾಲಿನಲ್ಲಿ ಅಮಲಾಪೂರ ಗ್ರಾಮದ ಲ್ಯಾಂಡ್ ಗ್ರಾಂಟ್ ಕಮಿಟಿಯಿಂದ ಸರ್ವೆ ನಂ. 71ರಲ್ಲಿ 4 ಎಕರೆ 38 ಗುಂಟೆ ಜಮೀನು ಮಂಜೂರಾಗಿತ್ತು. ಸದರಿ ಜಮೀನಿನಲ್ಲಿ 2 ಎಕರೆ ಜಾಗವನ್ನು ಸ್ಮಶಾನ ಭೂಮಿಗಾಗಿ ಜಿಲ್ಲಾಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ತಹಸೀಲ್ದಾರ್ ರವೀಂದ್ರ ದಾಮ ಅವರು ಸರ್ವೆ ಮಾಡಲು ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಗ್ರಾಮದ ತುಕರಾಮ ಗೌರೆ, ರಾಮು, ಅಂಬೇಡ್ಕರ್ ಸಾಗರ, ಶಿವರಾಜ ಗೌರೆ ಹಾಗೂ ನರಸಿಂಗ ಸಾಮ್ರಾಟ್ ಅವರು ಅ. 2, 2026ರಂದು ಜಿಲ್ಲಾಧಿಕಾರಿ ಹಾಗೂ ಬೀದರ್ ಸಹಾಯಕ ಆಯುಕ್ತರಿಗೆ ನೀಡಿದ ದೂರಿನ ಆಧಾರದ ಮೇಲೆ ಸಹಾಯಕ ಆಯುಕ್ತರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಸಂಬಂಧಪಟ್ಟ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಚಾರಣೆಗೆ ಮುನ್ನವೇ ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಒತ್ತಡ ಹೇರಿ, ಉಳಿದ 2 ಎಕರೆ 38 ಗುಂಟೆ ಜಮೀನನ್ನು ವಶಪಡಿಸಿಕೊಳ್ಳುವಂತೆ ಒತ್ತಾಯಿಸಿ ಗ್ರಾಮಕ್ಕೆ ಕರೆತಂದು ಸರ್ವೆ ಮಾಡಿಸುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ಅಂಬಾದಾಸ ಆರೋಪಿಸಿದ್ದಾರೆ.

ತಾವು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪರಿಶಿಷ್ಟ ಜಾತಿಯವರೇ ತಮ್ಮ ವಿರುದ್ಧ ಪದೇಪದೇ ದೂರು ನೀಡುವ ಮೂಲಕ ಅಧಿಕಾರಿಗಳ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಸ್ಮಶಾನ ಭೂಮಿಗಾಗಿ ತಮ್ಮ ತಂದೆಗೆ ಸೇರಿದ ಜಮೀನಿನ ಒಂದು ಭಾಗವನ್ನು ಸರ್ವೆ ಮಾಡಿಸಿ ನೀಡಿದರೂ, ಉಳಿದ ಜಮೀನನ್ನು ಉಪಜೀವನಕ್ಕೆ ಬಳಸದಂತೆ ಮಾಡುತ್ತಿರುವುದು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ತಂದೆಗೆ ಜಮೀನು ಮಂಜೂರಾಗಿರುವುದಕ್ಕೆ ಸಂಬಂಧಿಸಿದ ಗ್ರಾಂಟ್ ರಿಜಿಸ್ಟರ್ ದಾಖಲೆಗಳನ್ನು ಕರ್ನಾಟಕ ಮಾಹಿತಿ ಆಯೋಗದ ಮೂಲಕ ಪಡೆದುಕೊಂಡಿದ್ದು, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಅವರು ಜಮೀನಿನ ಕುರಿತು ದೃಢೀಕರಿಸಿ ನೀಡಿರುವ ದಾಖಲೆಗಳನ್ನೂ ಮನವಿಗೆ ಲಗತ್ತಿಸಿರುವುದಾಗಿ ತಿಳಿಸಿದ್ದಾರೆ.

ಗ್ರಾಂಟ್ ರಿಜಿಸ್ಟರ್‌ನ ಪುಟ ಸಂಖ್ಯೆ 1ರ ಕ್ರಮ ಸಂಖ್ಯೆ 6ರ ಎರಡನೇ ಭಾಗದಲ್ಲಿ ತಮ್ಮ ತಂದೆ ತುಕ್ಕಪ್ಪ ತಂದೆ ಲಾಲಪ್ಪ ಅವರ ಹೆಸರನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದು ನಮೂದಿಸಲಾಗಿದೆ. 2022ರಲ್ಲಿ ಗ್ರಾಮದ ಪರಿಶಿಷ್ಟ ಜಾತಿಯ ಜನರ ಹಿತದೃಷ್ಟಿಯಿಂದ ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಮ್ಮ ತಂದೆಯ ಜಮೀನಿನ ಸುಮಾರು 40–50 ವಿಸ್ತೀರ್ಣದ ಜಾಗವನ್ನು ನೀಡಿರುವುದಾಗಿ ವಿವರಿಸಿದ್ದಾರೆ.

2011ರಲ್ಲಿ ಬೀದರ್ ತಹಸೀಲ್ದಾರ್ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದರು. 2013ರಲ್ಲಿ ಸರ್ವೆ ಮಾಡಿ ಸದರಿ ಜಮೀನು ತುಕ್ಕಪ್ಪ ತಂದೆ ಲಾಲಪ್ಪ ಅವರಿಗೆ ಸೇರಿದೆ ಎಂದು ವರದಿ ನೀಡಿದ್ದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಕೆಲವರು ಮನೆ ಕೆಡವಿದ್ದು, ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಬಳಿಕ ತಹಸೀಲ್ದಾರ್ ಹಾಗೂ ಭೂಮಾಪನ ಇಲಾಖೆಯ ಸಿಬ್ಬಂದಿಗಳ ಸಮ್ಮುಖದಲ್ಲಿ ಜಮೀನು ಅಳತೆ ಮಾಡಿ, ಜಮೀನಿನ ಗಡಿಗೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರವನ್ನು 06-07-2024ರಂದು ಬರೆಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಬೀದರ್ ತಹಸೀಲ್ದಾರ್ ಅವರು 11-09-2026ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ವಿಭಾಗ, ಬೀದರ್ ಅವರಿಗೆ ಸಲ್ಲಿಸಿರುವ ಮೂರು ಪುಟಗಳ ಪತ್ರದಲ್ಲಿಯೂ ತಮ್ಮ ತಂದೆಯ ಹೆಸರು ಪುಟ ಸಂಖ್ಯೆ 2ರ ಕ್ರಮ ಸಂಖ್ಯೆ 9ರಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದ್ದಾರೆ.

“ಇಷ್ಟೆಲ್ಲ ದಾಖಲೆಗಳು ನಮ್ಮ ಬಳಿ ಇದ್ದರೂ, ನಮ್ಮ ಕುಟುಂಬಕ್ಕೆ ಪರೋಕ್ಷವಾಗಿ ಊರು ಬಿಡುವಂತೆ ಒತ್ತಡ ಹೇರುತ್ತಿರುವವರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ನಮಗೆ ನೆಮ್ಮದಿಯಿಂದ ಬದುಕಲು ಬಿಡಿ. ನಮ್ಮ ಜಮೀನಿನ ಹಕ್ಕನ್ನು ರಕ್ಷಿಸಿ, ಉಳಿದ ಜಮೀನನ್ನು ನಮಗೆ ಉಪಜೀವನಕ್ಕಾಗಿ ನೀಡಬೇಕು” ಎಂದು ಅಂಬಾದಾಸ ಸೈನೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.
📲Get App