🔥 TRENDING Surajpur Robbery: Six Arrested, Knife... Father‑Son Duo Arrested in Jalandhar f... Hoshiarpur Authorities Crack Down on R... 11 Arrested for Illegal Gambling in Ja... Delhi NCR Air Quality Hits 'Very Poor'... Delhi officials pledge to restore Yamu...
07 Nov 2026•
ગુજરાતી मराठी ਪੰਜਾਬੀ বাংলা

ಗಾಣದಾಳ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಲು ಜನಾಭಿಪ್ರಾಯಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾರಿ ಜನ ಬೆಂಬಲ 1,662ಕ್ಕೂ ಹೆಚ್ಚು ಜನರ ಭಾಗಿ; ದೇವದುರ್ಗ ತಾಲೂಕಿಗೆ ಸೇರ್ಪಡೆ ಪರವಾಗಿ ಗ್ರಾಮಸ್ಥರ ಒಲವು

✍️ Reporter: Khaja Hussain 🗓 07 Nov 2026, 07:25 PM 👁 16
Share: 💬 WhatsApp 📘 Facebook 𝕏 Post
**ದೇವದುರ್ಗ | ತಾಲೂಕು ಮರುಸೇರ್ಪಡೆ ಹೋರಾಟದ ಸುದ್ದಿ**

# ಗಾಣದಾಳ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಲು ಜನಾಭಿಪ್ರಾಯ

### ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾರಿ ಜನ ಬೆಂಬಲ 1,662ಕ್ಕೂ ಹೆಚ್ಚು ಜನರ ಭಾಗಿ; ದೇವದುರ್ಗ ತಾಲೂಕಿಗೆ ಸೇರ್ಪಡೆ ಪರವಾಗಿ ಗ್ರಾಮಸ್ಥರ ಒಲವು

**ಗಾಣದಾಳ, ನ. 7:** ರಾಯಚೂರು ಜಿಲ್ಲೆಯ ಅರಕೇರಾ ತಾಲೂಕು ವ್ಯಾಪ್ತಿಗೆ ಒಳಪಡುವ ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣದಾಳ, ಕಮಲದಿನ್ನಿ, ಕಕ್ಕಲದೊಡ್ಡಿ ಹಾಗೂ ಸುಣ್ಣದಕಲ್ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಗ್ರಾಮಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಅರಕೇರಾ ತಹಶೀಲ್ದಾರ್ ಗ್ರೇಡ್-2 ಶ್ರೀಧರ ಪವಾರ್ ಅವರ ನೇತೃತ್ವದಲ್ಲಿ ನ. 7ರಂದು ಬೆಳಿಗ್ಗೆ 11 ಗಂಟೆಗೆ ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಜನಾಭಿಪ್ರಾಯ ಸಂಗ್ರಹಿಸಲು ಸಭೆ ನಡೆಸಲಾಯಿತು. ಸಭೆಯಲ್ಲಿ 1,662ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೈ ಎತ್ತುವ ಮೂಲಕ ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವ ಬೇಡಿಕೆಗೆ ತಮ್ಮ ಬೆಂಬಲ ಸೂಚಿಸಿದರು.

ಜನಾಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ತಹಶೀಲ್ದಾರ್ ಶ್ರೀಧರ ಪವಾರ್, ಗ್ರಾಮಸ್ಥರ ಅಭಿಪ್ರಾಯಗಳನ್ನು ಸಭೆಯ ನಡಾವಳಿಯೊಂದಿಗೆ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಾಕ್ಸ್ ನಲ್ಲಿ

**ಅರಕೇರೆಯಿಂದ ದೂರ, ಜಾಲಹಳ್ಳಿಯಿಂದ ಸಮೀಪ:**

ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಅರಕೇರಾ ತಾಲೂಕು ಕೇಂದ್ರದಿಂದ ಸುಮಾರು 40ರಿಂದ 60 ಕಿ.ಮೀ. ದೂರದಲ್ಲಿವೆ. ಇದರಿಂದ ಸಾರ್ವಜನಿಕರು, ರೈತರು, ಮಹಿಳೆಯರು ಹಾಗೂ ವೃದ್ಧರು ಸರ್ಕಾರಿ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ತೆರಳಿ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಇದಕ್ಕೆ ವಿರುದ್ಧವಾಗಿ ಈ ಗ್ರಾಮಗಳು ದೇವದುರ್ಗ ತಾಲೂಕು ಜಾಲಹಳ್ಳಿ ಹೋಬಳಿಗೆ ಸಮೀಪದಲ್ಲಿವೆ. ಗಾಣದಾಳದಿಂದ ಜಾಲಹಳ್ಳಿಗೆ ಸುಮಾರು 6 ಕಿ.ಮೀ., ಕಮಲದಿನ್ನಿಯಿಂದ 3 ಕಿ.ಮೀ., ಕಕ್ಕಲದೊಡ್ಡಿಯಿಂದ 4 ಕಿ.ಮೀ. ಹಾಗೂ ಸುಣ್ಣದಕಲ್‌ನಿಂದ ಸುಮಾರು 10 ಕಿ.ಮೀ. ಅಂತರವಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಜಾಲಹಳ್ಳಿ ಹೋಬಳಿಯಲ್ಲಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಪಶು ಚಿಕಿತ್ಸಾಲಯ, ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಹಾಗೂ ವಿದ್ಯುತ್ ಕೇಂದ್ರ ಸೇರಿದಂತೆ ವಿವಿಧ ಮೂಲಸೌಕರ್ಯಗಳಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಸಂಪರ್ಕವೂ ಅನುಕೂಲಕರವಾಗಿದೆ. ಹೀಗಾಗಿ ಈ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವುದು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸೂಕ್ತ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಬಾಕ್ಸ್ ನಲ್ಲಿ

**ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ತೊಂದರೆ:**

ವೃದ್ಧಾಪ್ಯ ವೇತನ (OAP), ವಿಧವಾ ವೇತನ (PHP), ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳ ಫಲಾನುಭವಿಗಳು ಅರಕೇರಾ ತಾಲೂಕು ಕೇಂದ್ರಕ್ಕೆ ತೆರಳಿ ಸೌಲಭ್ಯ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಪ್ರಯಾಣ ಹಾಗೂ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ವೃದ್ಧರು ಮತ್ತು ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 4(2)(ಎ) ಹಾಗೂ ಸಂಬಂಧಿತ ಕಾನೂನು ನಿಯಮಗಳ ಅನ್ವಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

**ಮುಖಂಡರಿಂದ ತಾಲೂಕು ಮರುಸೇರ್ಪಡೆಗೆ ಒತ್ತಾಯ:**

ಸಭೆಯಲ್ಲಿ ಮಾತನಾಡಿದ ರಂಗಣ್ಣ ಕೋಲ್ಕಾರ್ ಅವರು, ಅರಕೇರಾ ತಾಲೂಕು ರಚನೆಯ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಗಿರಿಯಪ್ಪ ಪೂಜಾರಿ ಅವರು, ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಕೂಡಲೇ ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸಿದ್ಧನಗೌಡ ಮೂಡಲಗುಂಡ ಅವರು ಮಾತನಾಡಿ, ಅವೈಜ್ಞಾನಿಕ ವರದಿಗಳ ಆಧಾರದ ಮೇಲೆ ತಾಲೂಕು ರಚನೆ ಮಾಡಲಾಗಿದೆ ಎಂಬ ಆಕ್ಷೇಪವಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಈ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರಿಸಬೇಕು ಎಂದರು.

ಬಾಕ್ಸ್ ನಲ್ಲಿ

**ಚುನಾವಣೆ ಬಹಿಷ್ಕಾರದ ಎಚ್ಚರಿಕೆ:**

ಹೋರಾಟ ಸಮಿತಿ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಗ್ರಾಮಸ್ಥರ ಜನಾಭಿಪ್ರಾಯಕ್ಕೆ ಅಧಿಕಾರಿಗಳು ಮನ್ನಣೆ ನೀಡಬೇಕು. ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.

ಬಾಕ್ಸ್ ನಲ್ಲಿ

**ಮಹಿಳೆಯರಿಗೂ ತಾಲೂಕು ಕೇಂದ್ರದ ಪ್ರಯಾಣದ ಸಮಸ್ಯೆ:**

ಮಹಿಳೆಯರಾದ ಪಾರ್ವತಿ ಸೇರಿದಂತೆ ಹಲವರು ಮಾತನಾಡಿ, ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ಅರಕೇರಾಕ್ಕೆ ತೆರಳಿ ಬರಲು ಕಷ್ಟವಾಗುತ್ತಿದೆ. ಮಹಿಳೆಯರು ಹಾಗೂ ವೃದ್ಧರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಬಾಕ್ಸ್

**ಈ ಹಿಂದೆಯೇ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ:**

ಗಾಣದಾಳ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ 24-03-2025ರಂದು ಈ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವಂತೆ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಇದೀಗ ಗ್ರಾಮಸಭೆಯಲ್ಲಿಯೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಹಿ ಪಡೆದು ನಡಾವಳಿ ಸಿದ್ಧಪಡಿಸಲಾಯಿತು.

ಸಭೆಯಲ್ಲಿ ಅರಕೇರಾ ತಹಶೀಲ್ದಾರ್ ಗ್ರೇಡ್-2 ಶ್ರೀಧರ ಪವಾರ್, ಗಾಣದಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಮ್ಮ, ಕಾರ್ಯದರ್ಶಿ ಯಮನೂರಪ್ಪ, ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ವೈಶಾಲಿ ಸೇರಿದಂತೆ ನಾಲ್ಕು ಗ್ರಾಮಗಳ ಗ್ರಾಮಸ್ಥರು, ಮುಖಂಡರು, ಹೋರಾಟಗಾರರು, ಪತ್ರಕರ್ತರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಕೀಲ ಬಸವರಾಜ ಗಾಣದಾಳ, ವಕೀಲ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ವಸಂತಕುಮಾರ್, ಸಾಬಣ್ಣ ಹೂಗಾರ್, ಸಾಬಣ್ಣ ಕಮಲದಿನ್ನಿ, ಮೌನೇಶ್ ಗಾಣದಾಳ, ಶಿವು ಪಾಟೀಲ್, ವೆಂಕಟಡ್ಡಿ, ಶರಣಗೌಡ ಬೆನಕನ್, ಸುರೇಶ ಕಕ್ಕಲದೊಡ್ಡಿ, ಶಿವನಗೌಡ ದೇಸಾಯಿ, ಅಮರೇಗೌಡ ಕಮ್ಮಾಲದಿನ್ನಿ, ಮಲ್ಲನಗೌಡ ದೇಸಾಯಿ, ಶಿವನಗೌಡ ಕಕ್ಕಲದೊಡ್ಡಿ, ಮಲ್ಲಿಕಾರ್ಜುನ ಬೆನಕನ್, ಚನ್ನಬಸವ ನಾಯಕ, ವಾಸುದೇವ ಮ್ಯಾಕಲ್ ದೊಡ್ಡಿ, ಅಯ್ಯನಗೌಡ ಮಾಸ್ತಿ, ನಿಂಗಯ್ಯ, ಚನ್ನಬಸವಗೌಡ, ಶರಣಗೌಡ, ಯಲ್ಲನಗೌಡ ದಳಪತಿ, ಎಂ.ಆರ್. ಬಸವ, ಅಮರೇಗೌಡ ಹೊಟ್ಟಿ, ಹನುಮಂತಪ್ಪ ಬಡಿಗೇರ್, ಸಲ್ಮಾನ್ ದೊಡ್ಮನಿ, ಶಾಂತಪ್ಪ ಮಾನಗೇರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App