🔥 TRENDING Police seize 22 quarts of illicit liqu... Eight Dead in Electrocution at Under‑C... Fire engulfs Mahindra Thar outside Jai... Mentally ill father murders son at vil... मुरबाडमध्ये आगरी सेनेच्या वतीने ‘विद्य... मुरबाडमध्ये आगरी सेनेच्या वतीने ‘विद्य...
02 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ - ವಿಶೇಷ ಕಾನೂನು ರೂಪಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ

✍️ Reporter: Ningappa 🗓 02 Nov 2026, 01:46 PM 👁 16
Share: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಳ - ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ದೇವದುರ್ಗ, ಅರಕೇರಾ ಸಮಿತಿಗಳಿಂದ ಮನವಿ - 6 ಪ್ರಮುಖ ಬೇಡಿಕೆಗಳು

ರಾಯಚೂರಿನಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾನೂನು ರೂಪಿಸಿ - ದಲಿತ ಸಂಘರ್ಷ ಸಮಿತಿಯಿಂದ ಮನವಿ

ದೇವದುರ್ಗ, ನ. 2: ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು, ಅತ್ಯಾಚಾರ, ಕೊಲೆ, ಸಾಮಾಜಿಕ ಬಹಿಷ್ಕಾರದಂತಹ ಭೀಕರ ಹಲ್ಲೆಗಳ ಬಗ್ಗೆ ವಿಶೇಷ ಕಾನೂನು ರೂಪಿಸಲು ಆಗ್ರಹಿಸಿ *ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ರಾಜ್ಯ ಸಮಿತಿ ಬೆಂಗಳೂರು* ವತಿಯಿಂದ *ದೇವದುರ್ಗ ಮತ್ತು ಅರಕೇರಾ ತಾಲೂಕು ಸಮಿತಿಗಳು* ತಾಲೂಕು ತಹಶೀಲ್ದಾರ್ ಕಚೇರಿ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಸಂಚಾಲಕ *ಶಿವಪ್ಪ ಪಲಕನಮರಡಿ* ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ:

- *ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ* ದಲಿತ ಯುವಕನನ್ನು ಹಾಡಹಗಲೇ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದ್ದು, ಪ್ರಮುಖ ಆರೋಪಿ ಭೀಮರಾಯ ಹದ್ದಿನಾಳ ಅವರನ್ನು ಇನ್ನೂ ಬಂಧನ ಮಾಡಿಲ್ಲ.
- *ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ 21 ವರ್ಷದ ಪದವೀಧರ ದಲಿತ ಯುವತಿ ಅಶ್ವಿನಿ* ಅವರು ಬುಧವಾರ ಸಂಜೆ ಮನೆಯಿಂದ ಶೌಚಾಲಯಕ್ಕೆ ಹೊರಗೆ ಹೋದಾಗ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ ಬಾವಿಯಲ್ಲಿ ಎಸೆಯಲಾಗಿತ್ತು.
- *ಲಿಂಗಸೂಗೂರು ತಾಲೂಕಿನ ಪುರಸಭೆ ವ್ಯಾಪ್ತಿ ಕರಡಕಲ್ ಗ್ರಾಮದ ರಾಣೆಮ್ಮ* ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ.
- *ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ* ಆಂಜನೇಯ ಸ್ವಾಮಿ ದೇವರ ರಥೋತ್ಸವ ಸಂದರ್ಭದಲ್ಲಿ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ಸವರ್ಣೀಯರ ಗುಂಪೊಂದು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಗೊಂಡ ಸಂತ್ರಸ್ತರು ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
- *ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ* ಹೋಟೆಲ್ ನಲ್ಲಿ ದಲಿತ ಗ್ರಾಹಕರಿಗೆ ನಿಯಮಿತವಾಗಿ ಬಳಸುವ ಗ್ಲಾಸ್ ಗಳಲ್ಲಿ ನೀರು ನೀಡಲು ನಿರಾಕರಿಸಿ ದೂರ ನಿಂತು ಮೇಲಿನಿಂದ ಬಾಯಿಗೆ ಅಥವಾ ಕೈಗಳಿಗೆ ನೀರು ಸುರಿಸುತ್ತಿರುವಂತಹ ಅಸ್ಪೃಶ್ಯತೆಯ ಪ್ರಕರಣಗಳು ನಡೆಯುತ್ತಿವೆ.

"ಭಾರತೀಯ ಸಂವಿಧಾನದ 17ನೇ ವಿಧಿಯ ಪ್ರಕಾರ ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದ್ದರೂ, ಗ್ರಾಮೀಣ ಭಾಗಗಳಲ್ಲಿ ಇಂತಹ ಘಟನೆಗಳು ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ಅನೇಕ ಕಡೆ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗುತ್ತಿದ್ದು, ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯು ನೊಂದ ಸಮುದಾಯಕ್ಕೆ ನ್ಯಾಯ ಸಿಗದಂತೆ ಮಾಡುತ್ತಿದೆ" ಎಂದು ಮನವಿಯಲ್ಲಿ ತಿಳಿಸಲಾಗಿದೆ.

*ಪ್ರಮುಖ ಬೇಡಿಕೆಗಳು:*
1. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಎಲ್ಲಾ ದಲಿತರ ಮೇಲಿನ ಹಲ್ಲೆ, ಅತ್ಯಾಚಾರ, ಕೊಲೆ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
2. ತಿಡಿಗೋಳ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದವರನ್ನು ಕೂಡಲೇ ಬಂಧಿಸಿ, ಸಂತ್ರಸ್ತ ಕುಟುಂಬಗಳ ಮೇಲೆ ಪ್ರತಿ ದೂರು ದಾಖಲಿಸುವುದನ್ನು ಹಿಂಪಡೆಯಬೇಕು, ಸಂತ್ರಸ್ತರಿಗೆ ನ್ಯಾಯ ಕೊಡಿಸಿ, SC ST Prevention of Atrocities Act ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
3. ಭೂಮಾನಂದ ಕೊಲೆ ಪ್ರಕರಣದ ಸಿಐಡಿಗೆ ಒಪ್ಪಿಸಿ ತನಿಖೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ತ್ವರಿತಗತಿ ನ್ಯಾಯಾಲಯ (Fast-Track court) ಮೂಲಕ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ಕೊಡಿಸಬೇಕು.
4. ಅರಕೇರಾ ತಾಲೂಕಿನ ಮದರಕಲ್ ಗ್ರಾಮದ ಶ್ರೀ ನಾಮದೇವಗೌಡ ಗುರುಗಳು ಅಂಬಾಮಠ ಇವರು ದಲಿತ ಸ್ವಾಮೀಜಿಗಳಾಗಿದ್ದು ಸಮಾಜವನ್ನು ಮೂಢನಂಬಿಕೆಯಿಂದ ಹೊರತರಲು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅವರ ಎಳಿಗೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಬೆದರಿಕೆ, ದಕ್ಕೆ ಹಾಗೂ ಆಸ್ತಿ ಹಾನಿ ಮಾಡಲು ಪ್ರಯತ್ನಿಸುತ್ತಿದ್ದು ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.
5. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ ಎಂದು ತಿಳಿಸಿ ಸಂವಿಧಾನದ 17ನೇ ವಿಧಿಯ ಎಚ್ಚರಿಕೆ ನೀಡಿ ದಲಿತರ ಮೇಲಿನ ದೌರ್ಜನ್ಯಗಳಿಗೆ ಶಾಶ್ವತ ತಡೆ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ *ರಮೇಶ್ ಬಾವಿಮನಿ, ರಾಮಪ್ಪ ಮೇಸ್ತ್ರಿ, ಚೆನ್ನಮ್ಮ ಅರಕೇರಾ, ಈಶಪ್ಪ ಶಿವಂಗಿ, ಡೇವಿಡ್ ಮಸರಕಲ್, ಶಿವಪ್ಪ ಜೇರಬಂಡಿ, ರಂಗಪ್ಪ ತೊಗರಿ, ಸಿದ್ದಪ್ಪ ಜಿಂಕಲ್ ಪಲಕನಮರಡಿ, ರಮೇಶ ಭೋವಿ ಗೆಜ್ಜಬಾವಿ, ನಿಂಗಪ್ಪ ತಿಪ್ಪಲದಿನ್ನಿ, ದುರುಗೇಶ ವಿರೇಶ ಬೇರಿ, ಮಹೇಶ ಹಿರೇಬೂದೂರು, ಮೌನೇಶ ಕರಡೋಣ, ಆದಪ್ಪ ಮ್ಯಾಕಲದೊಡ್ಡಿ, ಸಿದ್ದಪ್ಪ ಬೂದಿನಾಳ, ಸಂಗಮೇಶ ಲಿಂಗದಹಳ್ಳಿ, ಗಫೂರ್, ಗೌರಂಪೇಟೆ, ರಮೇಶ ಹೆದ್ದಾರಿ, ಮೌನೇಶ ಕಕ್ಕಲದೊಡ್ಡಿ, ಮೌನೇಶ ಗಾಂಧಿ, ರಾಜು ತವಗ* ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📲Get App