🔥 TRENDING Virat Kohli reaches 15,000 ODI runs as... Mehbooba Mufti Meets Mirwaiz Umar Afte... Kohli, Gill guide India to victory in... Congress May Face SP in First Uttar Pr... Virat Kohli Achieves Another Remarkabl... Virat Kohli contributes with bat as In...
28 Sep 2026•
ગુજરાતી मराठी ਪੰਜਾਬੀ বাংলা
Education

ವಿಕಸಿತ ಭಾರತ-2047 ಗುರಿ ಸಾಧನೆಗೆ ಎನ್‌ಎಸ್‌ಎಸ್‌ ಜವಾಬ್ದಾರಿ ಮಹತ್ವದ್ದು: ಡಾ. ಬಾಲಕೃಷ್ಣ ಹೆಗಡೆ

✍️ Reporter: Viswanatha D R 🗓 24 Sep 2026, 09:26 PM 👁 43
Share: 💬 WhatsApp 📘 Facebook 𝕏 Post

ಹರಿಹರ: ಪ್ರಧಾನ ಮಂತ್ರಿಗಳ ವಿಕಸಿತ ಭಾರತ-2047ರ ಗುರಿ ಸಾಧಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌)ಯ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಶಿವಮೊಗ್ಗದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೆಗಡೆ ಹೇಳಿದರು.

ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್‌ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 1969ರಲ್ಲಿ ಆರಂಭವಾದ ಎನ್‌ಎಸ್‌ಎಸ್‌, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಾಭಿವೃದ್ಧಿ, ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾಕ್ಷರತೆ ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಕಾಲೇಜು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಹಪಾಠಿಗಳೊಂದಿಗೆ ಹೊಂದಾಣಿಕೆ, ಸಾಮಾಜಿಕ ಜವಾಬ್ದಾರಿ, ವ್ಯಕ್ತಿತ್ವ ವಿಕಸನ ಹಾಗೂ ಪ್ರತಿಕೂಲ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸುವಲ್ಲಿ ಎನ್‌ಎಸ್‌ಎಸ್‌ ಸಹಕಾರಿಯಾಗಿದೆ. ಪ್ರಕೃತಿ ವಿಕೋಪ ಸೇರಿದಂತೆ ಸಂಕಷ್ಟದ ಸಂದರ್ಭಗಳಲ್ಲಿ ಎನ್‌ಎಸ್‌ಎಸ್‌ ಸ್ವಯಂಸೇವಕರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದೇಶದ ಏಕತೆ ಮತ್ತು ಸಮಗ್ರತೆಯ ವಿಷಯ ಬಂದಾಗಲೂ ಸ್ವಯಂಸೇವಕರು ಉತ್ಸಾಹದಿಂದ ಸೇವೆಗೆ ಮುಂದಾಗುತ್ತಾರೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಹಿರಿಯ ಎನ್‌ಎಸ್‌ಎಸ್‌ ಸ್ವಯಂಸೇವಕಿ ಆಯೆಷಾ ಇಮ್ತಿಯಾಜ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಬೆಳೆಸಿದ ತಂದೆ-ತಾಯಿ ಹಾಗೂ ವಿದ್ಯೆ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು. ಗುರುಗಳು ವಿದ್ಯಾರ್ಥಿಗಳೆಂಬ ಕಲ್ಲನ್ನು ಕೆತ್ತಿ ಶಿಲೆಯನ್ನಾಗಿ ಮಾಡುವ ಶಿಲ್ಪಿಗಳಿದ್ದಂತೆ. ಎನ್‌ಎಸ್‌ಎಸ್‌ ನಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಬದುಕುವ ಧೈರ್ಯ, ಸಹಿಷ್ಣುತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಎನ್‌ಎಸ್‌ಎಸ್‌ ವತಿಯಿಂದ ಕೈಗೊಂಡ ಚೀನಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ್ ಆಜೂರ್ ಮಾತನಾಡಿ, ಎನ್‌ಎಸ್‌ಎಸ್‌ ವಿದ್ಯಾರ್ಥಿನಿಯರು ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳಬೇಕು. ವಾರ್ಷಿಕ ವಿಶೇಷ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕಿಯರು ಪಾಲ್ಗೊಂಡು ಗ್ರಾಮೀಣ ಜೀವನದ ಅನುಭವ ಪಡೆಯಬೇಕು ಎಂದು ಸಲಹೆ ನೀಡಿದರು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಪವಿತ್ರಾ ಎಸ್.ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್‌ಎಸ್‌ಎಸ್‌ ಘಟಕ-2ರ ಕಾರ್ಯಕ್ರಮಾಧಿಕಾರಿ ಡಾ. ಬಾಹುಬಲಿ ವನಕುದುರಿ, ಐಕ್ಯೂಎಸಿ ಸಂಯೋಜನಾಧಿಕಾರಿ ವೀಣಾ ಎಚ್.ಎಂ. ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎನ್‌ಎಸ್‌ಎಸ್‌ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಪುರಸ್ಕೃತ ಡಾ. ಬಾಲಕೃಷ್ಣ ಹೆಗಡೆ ಹಾಗೂ ಭಾರತ ಸರ್ಕಾರದ ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಚೀನಾ ಪ್ರವಾಸ ಕೈಗೊಂಡ ಆಯೆಷಾ ಇಮ್ತಿಯಾಜ್ ಅವರನ್ನು ಸನ್ಮಾನಿಸಲಾಯಿತು. ಸ್ವಯಂಸೇವಕಿ ನಂದಿನಿ ಸ್ವಾಗತಿಸಿದರು. ಜ್ಯೋತಿ ವಂದಿಸಿದರು. ಸವಿತಾ ಕಾರ್ಯಕ್ರಮ ನಿರ್ವಹಿಸಿದರು.
📲Get App