🔥 TRENDING ದೇವದುರ್ಗದಲ್ಲಿ ಕೆಲಸದ ಸಮಯದಲ್ಲಿ ಮನವಿ ಸಲ್ಲ... रोहित पठारे हत्याकांड: द रिअल पँथर ऑफ... Bihar Man Kills Wife After Diwali Figh... Bihar CM Suspends 15 Officials Over Pu... Pimpri-Chinchwad Roads Jammed as Diwal... Maharashtra Unveils Industrial Growth...
10 Nov 2026•
ગુજરાતી मराठी ਪੰਜਾਬੀ বাংলা

ಟಿಪ್ಪು ಸುಲ್ತಾನ್ ಜಯಂತಿ ಶುಭಾಶಯಗಳು - ಮಹಿಳೆಯರ ಹಕ್ಕಿಗಾಗಿ ಹೋರಾಡಿದ ಹೋರಾಟಗಾರ, ಸಾಮಾಜಿಕ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು - ಲೇಖನ, ಲಿಂಗಣ್ಣ ಮಕಾಶಿ

✍️ Reporter: Ningappa 🗓 10 Nov 2026, 04:08 PM 👁 18
Share: 💬 WhatsApp 📘 Facebook 𝕏 Post

ಟಿಪ್ಪು ಸುಲ್ತಾನ್ ಜಯಂತಿ - ಮಹಿಳೆಯರ ಹಕ್ಕು, ಘನತೆಗಾಗಿ ಹೋರಾಡಿದ ಟಿಪ್ಪು - ತನ್ನ ಆಡಳಿತದಲ್ಲಿ ವೇಶ್ಯಾವಾಟಿಕೆ, ದೇವದಾಸಿ ಪದ್ಧತಿ ನಿಷೇಧ - ಮಲಬಾರ್ ನಲ್ಲಿ ಕೆಳಜಾತಿಯ ಮಹಿಳೆಯರ ಮೇಲೆ ಇದ್ದ ಅಮಾನವೀಯ ಉಡುಪು ನಿರ್ಬಂಧ ನಿಷೇಧಿಸಲು ರಾಜಾಜ್ಞೆ - ವಿಜ್ಞಾನ, ತಂತ್ರಜ್ಞಾನಕ್ಕೆ ಅಪಾರ ಕೊಡುಗೆ - ಬ್ರಿಟಿಷರ ವಿರುದ್ಧ ರಾಜಿ ಇಲ್ಲದ ಹೋರಾಟ, ಶ್ರೀರಂಗಪಟ್ಟಣದಲ್ಲಿ ವೀರಮರಣ - ಲೇಖನ

ಟಿಪ್ಪು ಸುಲ್ತಾನ್ ಜಯಂತಿ ಶುಭಾಶಯಗಳು - ಮಹಿಳೆಯರ ಹಕ್ಕಿಗಾಗಿ ಹೋರಾಡಿದ ಹೋರಾಟಗಾರ

ಲೇಖನ,

ಹೌದು, ಟಿಪ್ಪು ಸುಲ್ತಾನ್ ತನ್ನ ಆಡಳಿತ ಪ್ರದೇಶದಲ್ಲಿ ವೇಶ್ಯಾವಾಟಿಕೆ ಮತ್ತು ದೇವದಾಸಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರು. ಹಾಗಾಗಿ ಆತನನ್ನು ಪುಟ್ಟ ಭದ್ರ ಹಿತಾಸಕ್ತಿಗಳು ಹಿಂದೂ ವಿರೋಧಿ, ಮತಾಂತರ ಎಂದೆಲ್ಲಾ ಕರೆಯುತ್ತಾರೆ.

ಆದರೆ ನಿಜವಾದ ಇತಿಹಾಸವನ್ನು ನೋಡಿದರೆ ಟಿಪ್ಪು ಸುಲ್ತಾನ್ ಒಬ್ಬ ರಾಜನಷ್ಟೇ ಅಲ್ಲ, ಒಬ್ಬ ಸಾಮಾಜಿಕ ಸುಧಾರಕ, ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಒಬ್ಬ ವೈಜ್ಞಾನಿಕ ಮನೋಭಾವದ ಆಡಳಿತಗಾರನಾಗಿದ್ದರು ಎಂಬುದು ಗೊತ್ತಾಗುತ್ತದೆ.

ಟಿಪ್ಪು ಸುಲ್ತಾನನು ಕರ್ನಾಟಕದ ಮಹಿಳೆಯರ ಹಕ್ಕುಗಳು ಮತ್ತು ಘನತೆಗಾಗಿ ಅಲ್ಲದೇ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೂ ಅಪಾರ ಕೊಡುಗೆ ನೀಡಿ ಹೋರಾಡಿದ ಹಾಗೂ ಸಾಮಾಜಿಕ ಸುಧಾರಣೆಗಳನ್ನು ತಂದುಕೊಟ್ಟರು.

ಆ ಕಾಲದಲ್ಲಿ ಹೆಣ್ಣು ಎಂದರೆ ಕೇವಲ ಮನೆಯ ಒಳಗಿನ ವಸ್ತು, ದೇವಸ್ಥಾನದ ಸೇವೆಗೆ, ಶ್ರೀಮಂತರ ಭೋಗಕ್ಕೆ ಮೀಸಲಾದ ಜೀವ ಎಂಬ ಭಾವನೆ ಇತ್ತು. ದೇವದಾಸಿ ಪದ್ಧತಿಯ ಹೆಸರಿನಲ್ಲಿ ಎಷ್ಟೋ ಹೆಣ್ಣು ಮಕ್ಕಳ ಬದುಕು ಹಾಳಾಗಿತ್ತು. ದೇವರ ಹೆಸರಿನಲ್ಲಿ ಹೆಣ್ಣನ್ನು ಶೋಷಣೆ ಮಾಡುವ ಈ ಪದ್ಧತಿಯನ್ನು ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿದರು. ಹೆಣ್ಣು ದೇವರ ಸೇವಕಿಯಲ್ಲ, ಅವಳು ಮನುಷ್ಯಳು, ಅವಳಿಗೆ ಘನತೆ ಇದೆ, ಅವಳಿಗೆ ಬದುಕುವ ಹಕ್ಕು ಇದೆ ಎಂದು ಅವರು ಸಾರಿದರು.

ಅದೇ ರೀತಿ ವೇಶ್ಯಾವಾಟಿಕೆ ಪದ್ಧತಿಯ ವಿರುದ್ಧವೂ ಟಿಪ್ಪು ಕಠಿಣ ಕ್ರಮ ಕೈಗೊಂಡರು. ಹೆಣ್ಣಿನ ದೇಹವನ್ನು ವ್ಯಾಪಾರ ಮಾಡುವ, ಹೆಣ್ಣನ್ನು ಸರಕಿನಂತೆ ನೋಡುವ ಪದ್ಧತಿಗೆ ಅವರು ಕಡಿವಾಣ ಹಾಕಿದರು. ಹೆಣ್ಣಿನ ಮೇಲೆ ನಡೆಯುತ್ತಿದ್ದ ಈ ಶೋಷಣೆಯನ್ನು ತಡೆಯಲು ಅವರು ಕಾನೂನು ಮಾಡಿದರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಹಿಳೆಯರ ಉಡುಪಿನ ಹಕ್ಕಿಗಾಗಿ ನಡೆದ ಅಧಿಕೃತ ಮೇಲುಡುಪು ಹೋರಾಟ (ಚನ್ನಾರ್ ದಂಗೆ) ಟಿಪ್ಪುವಿನ ಮರಣದ ನಂತರ ಬ್ರಿಟಿಷರ ಅವಧಿಯಲ್ಲಿ ತೀವ್ರವಾಯಿತು. ಆದರೆ ಅದಕ್ಕೂ ಮುನ್ನ ತಾನು ವಶಪಡಿಸಿಕೊಂಡಿದ್ದ ಮಲಬಾರ್ ಭಾಗದಲ್ಲಿ ಕೆಳಜಾತಿಯ ಮಹಿಳೆಯರು ಬಟ್ಟೆ ಧರಿಸದಂತೆ ತಡೆಯುತ್ತಿದ್ದ ಅಮಾನವೀಯ ಪದ್ಧತಿಯನ್ನು ನಿಷೇಧಿಸಲು ಟಿಪ್ಪು ಸುಲ್ತಾನ್ ರಾಜಾಜ್ಞೆ ಹೊರಡಿಸಿದ್ದರು.

ಅದನ್ನು ಸ್ವಲ್ಪ ಆಳವಾಗಿ ನೋಡಬೇಕು. ಆ ಕಾಲದಲ್ಲಿ ಕೆಳಜಾತಿಯ ಮಹಿಳೆಯರು ಮೇಲುಡುಪು ಧರಿಸಬಾರದು, ಎದೆ ಮುಚ್ಚಬಾರದು ಎಂಬ ಅಮಾನವೀಯ ನಿಯಮ ಇತ್ತು. ಇದು ಜಾತಿಯ ಹೆಸರಿನಲ್ಲಿ ಹೆಣ್ಣಿನ ಮಾನವನ್ನು ಕಿತ್ತುಕೊಳ್ಳುವ ಕ್ರೌರ್ಯವಾಗಿತ್ತು. ಹೆಣ್ಣು ಎಷ್ಟೇ ಬಡವಳಾಗಿದ್ದರೂ, ಕೆಳಜಾತಿಯವಳಾಗಿದ್ದರೂ ಅವಳಿಗೆ ಮಾನ ಇದೆ, ಅವಳಿಗೆ ಬಟ್ಟೆ ಧರಿಸುವ ಹಕ್ಕು ಇದೆ ಎಂದು ಟಿಪ್ಪು ಅರ್ಥ ಮಾಡಿಕೊಂಡಿದ್ದರು. ಅದಕ್ಕಾಗಿಯೇ ಅವರು ಮಲಬಾರ್ ಭಾಗದಲ್ಲಿ ಈ ಪದ್ಧತಿಯನ್ನು ನಿಷೇಧಿಸಿ ರಾಜಾಜ್ಞೆ ಹೊರಡಿಸಿದರು. ಮೇಲುಡುಪು ಧರಿಸುವ ಹಕ್ಕು ಪ್ರತಿಯೊಬ್ಬ ಮಹಿಳೆಗೂ ಇದೆ ಎಂದು ಅವರು ಘೋಷಿಸಿದರು. ಇದು ಆ ಕಾಲಕ್ಕೆ ಬಹಳ ದೊಡ್ಡ ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

ಟಿಪ್ಪು ಸುಲ್ತಾನ್ ಮಹಿಳೆಯರ ವಿಷಯದಲ್ಲಿ ಮಾತ್ರವಲ್ಲ, ಇಡೀ ಸಮಾಜದ ಸುಧಾರಣೆಯ ವಿಷಯದಲ್ಲೂ ಮುಂದಿದ್ದರು. ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಅವರು ನಿಂತರು. ರೈತರಿಗಾಗಿ, ಬಡವರಿಗಾಗಿ, ಕಾರ್ಮಿಕರಿಗಾಗಿ ಅವರು ಹಲವು ಸುಧಾರಣೆಗಳನ್ನು ತಂದರು. ಕಂದಾಯ ವ್ಯವಸ್ಥೆಯನ್ನು ಸರಿಪಡಿಸಿದರು, ವ್ಯಾಪಾರವನ್ನು ಬೆಳೆಸಿದರು, ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಟಿಪ್ಪು ಸುಲ್ತಾನ್ ತಮ್ಮ ಕಾಲಕ್ಕಿಂತ ಬಹಳ ಮುಂದಿದ್ದರು. ರಾಕೆಟ್ ತಂತ್ರಜ್ಞಾನವನ್ನು ಯುದ್ಧದಲ್ಲಿ ಮೊದಲು ಬಳಸಿದವರಲ್ಲಿ ಟಿಪ್ಪು ಒಬ್ಬರು. ಮೈಸೂರು ರಾಕೆಟ್ ಗಳು ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದವು. ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನೀರಾವರಿಯಲ್ಲಿ ಹೊಸ ವ್ಯವಸ್ಥೆ, ಕೈಗಾರಿಕೆಯಲ್ಲಿ ಹೊಸ ಪ್ರಯೋಗಗಳನ್ನು ಅವರು ಮಾಡಿದರು. ಪುಸ್ತಕಗಳನ್ನು ಓದುವ, ಜ್ಞಾನವನ್ನು ಬೆಳೆಸುವ ಹವ್ಯಾಸ ಅವರಿಗಿತ್ತು.

ಟಿಪ್ಪು ಸುಲ್ತಾನರ ಹೋರಾಟದ ಇತಿಹಾಸವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತ್ಯಂತ ಗಂಭೀರ ಹಾಗೂ ರೋಮಾಂಚನಕಾರಿ ಅಧ್ಯಾಯಗಳಲ್ಲಿ ಒಂದಾಗಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸಿದ ಅವರು, ಬ್ರಿಟಿಷರ ಪಾಲಿಗೆ ಅತ್ಯಂತ ಅಪಾಯಕಾರಿ ಶತ್ರುವಾಗಿದ್ದರು.

ಬ್ರಿಟಿಷರು ಬೇರೆ ರಾಜರನ್ನು ಆಮಿಷ ತೋರಿಸಿ, ಬೆದರಿಸಿ ತಮ್ಮ ಕಡೆ ಸೆಳೆದುಕೊಂಡರು. ಹಲವು ರಾಜರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ತಮ್ಮ ಸಿಂಹಾಸನವನ್ನು ಉಳಿಸಿಕೊಂಡರು. ಆದರೆ ಟಿಪ್ಪು ಹಾಗೆ ಮಾಡಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ, ಮೈಸೂರಿನ ಸ್ವಾಭಿಮಾನಕ್ಕಾಗಿ ಅವರು ಕೊನೆಯವರೆಗೂ ಹೋರಾಡಿದರು. ಬ್ರಿಟಿಷರ ಜೊತೆ ರಾಜಿ ಮಾಡಿಕೊಂಡು ಬದುಕುವುದಕ್ಕಿಂತ, ಹೋರಾಡಿ ಸಾಯುವುದು ಲೇಸು ಎಂದು ಅವರು ನಂಬಿದ್ದರು.

ಟಿಪ್ಪು ಸುಲ್ತಾನರ ಹೋರಾಟವು ಕೇವಲ ಸಾಂಪ್ರದಾಯಿಕ ಯುದ್ಧವಾಗಿರದೆ, ಆಧುನಿಕ ತಂತ್ರಜ್ಞಾನ, ರಾಜತಾಂತ್ರಿಕತೆ ಮತ್ತು ದೃಢ ಸಂಕಲ್ಪದ ಹೋರಾಟವಾಗಿತ್ತು. ಅವರು ಫ್ರಾನ್ಸ್, ಟರ್ಕಿ, ಅಫ್ಘಾನಿಸ್ತಾನದಂತಹ ದೇಶಗಳ ಜೊತೆ ಸಂಪರ್ಕ ಇಟ್ಟುಕೊಂಡು ಬ್ರಿಟಿಷರ ವಿರುದ್ಧ ಅಂತಾರಾಷ್ಟ್ರೀಯ ಮೈತ್ರಿ ಕಟ್ಟಲು ಪ್ರಯತ್ನಿಸಿದರು. ತಮ್ಮ ಸೈನ್ಯವನ್ನು ಆಧುನಿಕವಾಗಿ ಕಟ್ಟಿದರು. ತಮ್ಮ ಆಡಳಿತವನ್ನು ಬಲಪಡಿಸಿದರು.

ಮೈಸೂರು ಯುದ್ಧದಲ್ಲಿ, ಬ್ರಿಟಿಷರು ಮೈಸೂರನ್ನು ಸಂಪೂರ್ಣವಾಗಿ ಸುತ್ತುವರೆದಾಗ, ಟಿಪ್ಪು ಶರಣಾಗಲು ನಿರಾಕರಿಸಿದರು. ನೂರು ವರ್ಷ ಕುರಿಯಾಗಿ ಬದುಕುವುದಕ್ಕಿಂತ, ಎರಡು ದಿನ ಸಿಂಹವಾಗಿ ಬದುಕಿ ಸಾಯುವುದು ಲೇಸು ಎಂದು ಘೋಷಿಸಿ, ಶ್ರೀರಂಗಪಟ್ಟಣದ ಕೋಟೆಯನ್ನು ರಕ್ಷಿಸುತ್ತಾ ರಣರಂಗದಲ್ಲೇ ವೀರಮರಣ ಅಪ್ಪಿದರು.

ಆ ಮಾತು ಇಂದಿಗೂ ನಮ್ಮ ಕಿವಿಯಲ್ಲಿ ಗುಂಯ್ ಗುಡುತ್ತಿದೆ. ಕುರಿಯಾಗಿ ಬದುಕುವುದಕ್ಕಿಂತ ಸಿಂಹವಾಗಿ ಸಾಯುವುದು ಲೇಸು ಎಂಬುದು ಕೇವಲ ಒಂದು ಮಾತಲ್ಲ, ಅದು ಒಂದು ಬದುಕಿನ ತತ್ವ. ಸ್ವಾಭಿಮಾನಕ್ಕಾಗಿ ಬದುಕುವುದು, ಅನ್ಯಾಯದ ವಿರುದ್ಧ ಹೋರಾಡುವುದು, ಗುಲಾಮಗಿರಿಗೆ ತಲೆಬಾಗದಿರುವುದು ಎಂಬುದೇ ಆ ಮಾತಿನ ಅರ್ಥ.

ಇಂದು ಟಿಪ್ಪು ಸುಲ್ತಾನರ ಬಗ್ಗೆ ಅಪಪ್ರಚಾರ ಮಾಡುವವರು ಇದ್ದಾರೆ. ಅವರನ್ನು ಒಂದು ಧರ್ಮಕ್ಕೆ ಸೀಮಿತ ಮಾಡಿ, ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಆದರೆ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ನೋಡಿದರೆ ಟಿಪ್ಪು ಎಲ್ಲಾ ಧರ್ಮದ ಜನರನ್ನು ಗೌರವಿಸುತ್ತಿದ್ದರು, ಹಿಂದೂ ದೇವಾಲಯಗಳಿಗೆ ದಾನ ನೀಡಿದ್ದರು, ಹಿಂದೂ ಅಧಿಕಾರಿಗಳನ್ನು ತಮ್ಮ ಆಡಳಿತದಲ್ಲಿ ಉನ್ನತ ಹುದ್ದೆಯಲ್ಲಿ ಇಟ್ಟಿದ್ದರು ಎಂಬುದು ಗೊತ್ತಾಗುತ್ತದೆ. ಅವರ ಹೋರಾಟ ಧರ್ಮದ ವಿರುದ್ಧವಾಗಿರಲಿಲ್ಲ, ಅದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧವಾಗಿತ್ತು, ಶೋಷಣೆಯ ವಿರುದ್ಧವಾಗಿತ್ತು, ಅನ್ಯಾಯದ ವಿರುದ್ಧವಾಗಿತ್ತು.

ಹಾಗಾಗಿ ಟಿಪ್ಪು ಸುಲ್ತಾನ್ ಜಯಂತಿ ಎಂದರೆ ಕೇವಲ ಒಬ್ಬ ರಾಜನ ಜನ್ಮದಿನವಲ್ಲ. ಅದು ಸ್ವಾಭಿಮಾನದ, ಸಮಾನತೆಯ, ಮಹಿಳಾ ಹಕ್ಕಿನ, ಸಾಮಾಜಿಕ ನ್ಯಾಯದ, ಸ್ವಾತಂತ್ರ್ಯದ ಸಂಕೇತದ ಜಯಂತಿ.

ಎಲ್ಲಾ ಸಮಾನತಾವಾದಿಗಳಿಗೆ ಟಿಪ್ಪು ಸುಲ್ತಾನ್ ಜಯಂತಿ ಶುಭಾಶಯಗಳು.


🖌 ಲಿಂಗಣ್ಣ ಮಕಾಶಿ
📲Get App