🔥 TRENDING Sanitation workers' strike stalls Bhop... बीडर पुलिस ने संतपूर के जंबगी-बी में 6... *भाजपा जिला अध्यक्ष सुनील मौदगिल का सच... Bihar Youth Runs 15,000 km to Pray for... সাগরদ্বীপে নদী বাঁধ ভেঙে গেল सिकंदराराऊ: राजकमल पब्लिक स्कूल में दी...
05 Nov 2026•
ગુજરાતી मराठी ਪੰਜਾਬੀ বাংলা

ಮಹಿಳೆಯರ ಸುರಕ್ಷತೆಗೆ ಕಾನೂನು ಅರಿವು ಅಗತ್ಯ: ನ್ಯಾಯಾಧೀಶ ಮಂಜುನಾಥ ಬಣಕಾರ ಸೈಬರ್ ಅಪರಾಧ, ಸಾಮಾಜಿಕ ಜಾಲತಾಣ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಎಚ್ಚರಿಕೆ

✍️ Reporter: Viswanatha D R 🗓 05 Nov 2026, 07:10 PM 👁 12
Share: 💬 WhatsApp 📘 Facebook 𝕏 Post
ಹೊನ್ನಾಳಿ, ನ. 05: ಎಸ್. ಎಂ.ಎಸ್.ಎಫ್. ಜಿ ಕಾಲೇಜನಲ್ಲಿ ಮಹಿಳೆಯರ ಸುರಕ್ಷತೆ, ಕಾನೂನು ಅರಿವು ಹಾಗೂ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳು ಜಾಗೃತರಾಗಿರುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.

ಪಟ್ಟಣದ ಕಾಲೇಜಿನಲ್ಲಿ ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯ ಅಕ್ಕಪಡೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ವಿವಿಧ ಅಪರಾಧ ಪ್ರಕರಣಗಳ ಕುರಿತು ನೈಜ ಘಟನೆಗಳ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಪದವಿ ಶಿಕ್ಷಣದ ಅವಧಿಯಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಂದೆ-ತಾಯಿ ಹಾಗೂ ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆದುಕೊಳ್ಳಬೇಕು. ಕ್ಷಣಿಕ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ತಪ್ಪು ನಿರ್ಧಾರಗಳಿಂದ ತಮ್ಮ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಗಮನಿಸಿದ್ದೇನೆ. ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟಿಸುವಾಗ ನ್ಯಾಯಾಧೀಶರಿಗೂ ನೋವಾಗುತ್ತದೆ. ಆದ್ದರಿಂದ ತಂದೆ-ತಾಯಿಯ ಕಷ್ಟಗಳನ್ನು ಅರಿತು, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಅಕ್ಕಪಡೆ ತಂಡದ ಪ್ರತಿನಿಧಿಗಳು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ, ಸ್ಟೇಟಸ್ ಹಾಗೂ ವಿಡಿಯೊಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವೈಯಕ್ತಿಕ ಭಾವಚಿತ್ರಗಳನ್ನು ವಿರೂಪಗೊಳಿಸಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳುವ ವಿಧಾನ, ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಹಾಗೂ ವಾಹನ ಚಾಲನೆ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ. ನಾಗೇಶಪ್ಪ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ದೊಡ್ಡಗೌಡ್ರ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಕುಮಾರ್ ನಾಯಕ್ ವಂದಿಸಿದರು.

ಹೊನ್ನಾಳಿ ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ, ವಕೀಲ ಕರುಣಾಕರ, ಪೊಲೀಸ್ ಇಲಾಖೆಯ ಪಿಎಸ್‌ಐ ನಿರ್ಮಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜಪ್ಪ ವಿ., ಕಚೇರಿ ಅಧೀಕ್ಷಕ ಲೋಕೇಶ್ವರ ಎಂ., ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
📲Get App