🔥 TRENDING ৫ নভেম্বর নতুন শিল্পনীতি প্রকাশ, ৫০ লক... સુરતમાં ટ્રાફિક ટ્રેપ કેસમાં બે આરોપીઓ... Delhi Police Arrest Youth in MCOCA Cas... Two masked gunmen fire at Dubai busine... Youth Congress Activists Protest on Ro... रबी सीजन 2026-27: किसानों को सुगमता से...
28 Oct 2026•
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಂ.ಆರ್‌.ಎಚ್‌.ಎಸ್. ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಆಗ್ರಹ

✍️ Reporter: Khaja Hussain 🗓 28 Oct 2026, 09:20 PM 👁 10
Share: 💬 WhatsApp 📘 Facebook 𝕏 Post
**ರಾಯಚೂರು | ವಿಶೇಷ ವರದಿ**

# ರಾಯಚೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಿ
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಂ.ಆರ್‌.ಎಚ್‌.ಎಸ್. ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಆಗ್ರಹ

**ದೇವದುರ್ಗ, ಅ. 27:** ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು ಎಂಟು ದಶಕಗಳು ಕಳೆದರೂ ರಾಯಚೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ತಾರತಮ್ಯದ ಘಟನೆಗಳು ವರದಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹೋಟೆಲ್‌ಗಳಲ್ಲಿ ನೀರು ಕುಡಿಯುವುದರಿಂದ ಹಿಡಿದು ದೇವಸ್ಥಾನ ಪ್ರವೇಶದವರೆಗೆ ದಲಿತರು ತಾರತಮ್ಯ ಎದುರಿಸುತ್ತಿರುವ ಆರೋಪಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ ಎಂದು ಎಂ.ಆರ್‌.ಎಚ್‌.ಎಸ್. ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ದಲಿತರು ಹೋಟೆಲ್‌ಗೆ ತೆರಳಿದಾಗ ಅವರಿಗೆ ನೀರನ್ನು ಎತ್ತಿ ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇತ್ತೀಚೆಗೆ ಸಿಂಧನೂರು ತಾಲೂಕಿನ ತಿಡಿಗೋಳು ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದಲಿತರು ದೇವಸ್ಥಾನಕ್ಕೆ ಬಂದರೆ ಮೈಲಿಗೆಯಾಗುತ್ತದೆ ಎಂದು ಆರೋಪಿಸಿ, ಸುಮಾರು 200ರಿಂದ 250 ಮಂದಿ ದಲಿತರ ಕೇರಿಗೆ ನುಗ್ಗಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ತಿಳಿಸಿದರು.

ಈ ಘಟನೆಯಲ್ಲಿ ಹಲವರ ಮೇಲೆ ಬಡಿಗೆ ಮತ್ತು ಬೆತ್ತಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ಗಾಯಾಳುಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಎನ್ನಲಾಗಿದ್ದು, ದೌರ್ಜನ್ಯಕ್ಕೆ ಒಳಗಾದವರ ಮೇಲೆಯೂ ಪ್ರತಿದೂರು ದಾಖಲಾಗಿರುವುದು ನ್ಯಾಯದ ನಿರೀಕ್ಷೆಯಲ್ಲಿರುವ ದಲಿತ ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದು ಅವರು ಹೇಳಿದರು.

ಇದೇ ಅಕ್ಟೋಬರ್ 26ರಂದು ಲಿಂಗಸುಗೂರು ತಾಲೂಕಿನ ಕಾಳಪುರ ಗ್ರಾಮದಲ್ಲಿ ದಲಿತರು ಹೋಟೆಲ್‌ಗೆ ಚಹಾ ಕುಡಿಯಲು ತೆರಳಿದ್ದರು. ಈ ವೇಳೆ ಚಹಾ ಕುಡಿಯುವ ಮೊದಲು ನೀರು ಕೇಳಿದಾಗ ಪ್ಲಾಸ್ಟಿಕ್ ಲೋಟದ ಮೂಲಕ ನೀರನ್ನು ಬೊಗಸೆಗೆ ಸುರಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ದೃಶ್ಯಗಳು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ ಎಂದು ತಿಳಿಸಿದರು.

### ಕಾನೂನು ಇದ್ದರೂ ಅಸ್ಪೃಶ್ಯತೆ ಏಕೆ?

ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿರುವುದು ಸಂವಿಧಾನದ ಸಮಾನತೆ ಮತ್ತು ಮಾನವ ಘನತೆಯ ಮೌಲ್ಯಗಳ ಅನುಷ್ಠಾನದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೊಲ-ಮನೆಗಳ ಕೆಲಸಗಳಿಗೆ ದಲಿತರ ಸೇವೆ ಅಗತ್ಯವೆಂದು ಪರಿಗಣಿಸುವ ಕೆಲವರು, ಅದೇ ದಲಿತರು ದೇವಸ್ಥಾನಗಳಿಗೆ ಬಂದಾಗ ಮೈಲಿಗೆಯಾಗುತ್ತದೆ ಎನ್ನುವುದು ಯಾವ ನ್ಯಾಯ ಎಂದು ಹನುಮಂತಪ್ಪ ಮನ್ನಾಪುರಿ ಪ್ರಶ್ನಿಸಿದ್ದಾರೆ.

ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಬದಲು ಅವರ ಮೇಲೆಯೇ ಪ್ರಕರಣ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪ್ರತಿಯೊಂದು ಪ್ರಕರಣದಲ್ಲಿಯೂ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

### ಅಸ್ಪೃಶ್ಯತೆ ನಿರ್ಮೂಲನೆಗೆ ಜಾಗೃತಿ ಅಗತ್ಯ

ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಸಮಾಜ ಕಲ್ಯಾಣ ಇಲಾಖೆಯು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಂವಿಧಾನಾತ್ಮಕ ಹಕ್ಕುಗಳು, ಸಾಮಾಜಿಕ ಸಮಾನತೆ ಮತ್ತು ಕಾನೂನುಬದ್ಧ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಅಸ್ಪೃಶ್ಯತೆ ಹಾಗೂ ಜಾತಿ ಆಧಾರಿತ ದೌರ್ಜನ್ಯಗಳ ಘಟನೆಗಳು ನಡೆದಾಗ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ನಿಗಾ ವಹಿಸಿ, ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಗೃಹ ಸಚಿವರು ಹಾಗೂ ಸಂಬಂಧಪಟ್ಟ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ಆಧಾರಿತ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಎಂ.ಆರ್‌.ಎಚ್‌.ಎಸ್. ರಾಯಚೂರು ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಆಗ್ರಹಿಸಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**


*
📲Get App