🔥 TRENDING Mumbai Endures Record Heatwave, Linked... Supreme Court to Hear Dhanlaxmi Mercha... જામનગરની જી.જી. હોસ્પિટલમાં બારી પર ચડ... અમરેલીમાં કિશોરીનું અપહરણ: અજાણ્યા ઈસમ... Bihar Government Allocates ₹1,850 Cror... मिशन शक्ति अभियान: कक्षा 7 की छात्रा प...
15 Oct 2026•
ગુજરાતી मराठी ਪੰਜਾਬੀ বাংলা

ಯಲಗಟ್ಟಾದಲ್ಲಿ ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಸಭೆ: ಅಕ್ರಮ ಮದ್ಯ ಮಾರಾಟ, ಕುಡಿಯುವ ನೀರಿನ ಸಮಸ್ಯೆ ವಿರುದ್ಧ ಮಹಿಳೆಯರ ಆಕ್ರೋಶ

✍️ Reporter: Khaja Hussain 🗓 15 Oct 2026, 09:08 PM 👁 9
Share: 💬 WhatsApp 📘 Facebook 𝕏 Post
**ಲಿಂಗಸುಗೂರು | ಬ್ರೇಕಿಂಗ್ ನ್ಯೂಸ್**

# ಯಲಗಟ್ಟಾದಲ್ಲಿ ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಸಭೆ: ಅಕ್ರಮ ಮದ್ಯ ಮಾರಾಟ, ಕುಡಿಯುವ ನೀರಿನ ಸಮಸ್ಯೆ ವಿರುದ್ಧ ಮಹಿಳೆಯರ ಆಕ್ರೋಶ

**16–17 ವರ್ಷದ ವಿದ್ಯಾರ್ಥಿಗಳು ಮದ್ಯವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆತಂಕ; ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮಕ್ಕೆ ತಹಶೀಲ್ದಾರ್ ಸೂಚನೆ**

**ಲಿಂಗಸುಗೂರು, ಅ.15:** ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಬಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಗಟ್ಟಾ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆದ ದೌರ್ಜನ್ಯ ಪ್ರಕರಣಗಳ ನಿಯಂತ್ರಣ ಸಭೆಯಲ್ಲಿ ಗ್ರಾಮದ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಪೈಪ್‌ಲೈನ್ ಅಳವಡಿಸಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಮಹಿಳೆಯರು ಅಧಿಕಾರಿಗಳ ಗಮನಕ್ಕೆ ತಂದರು.

**ಮೂಲಭೂತ ಸೌಕರ್ಯಗಳ ಕೊರತೆಗೆ ಆಕ್ರೋಶ**

ಗ್ರಾಮದ ಪರಿಶಿಷ್ಟ ಜಾತಿ (ಎಸ್‌ಸಿ) ವಾರ್ಡ್ ಹಾಗೂ ಅಂಬೇಡ್ಕರ್ ಸರ್ಕಲ್ ಓಣಿಯಲ್ಲಿ ಸಿಸಿ ರಸ್ತೆ ನಿರ್ಮಿಸಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ನಿಂತಿದ್ದು, ವಿದ್ಯುತ್ ದೀಪಗಳ ಕಂಬಗಳ ಕೊರತೆಯಿಂದ ರಾತ್ರಿ ವೇಳೆ ಓಣಿ ಕತ್ತಲಲ್ಲಿ ಮುಳುಗುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದರು.

ಇದಲ್ಲದೆ, ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಗ್ರಂಥಾಲಯದಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

**ಅಕ್ರಮ ಮದ್ಯ ಮಾರಾಟದಿಂದ ಯುವಜನತೆ ಹಾದಿ ತಪ್ಪುವ ಆತಂಕ**

ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿದ ಮಹಿಳೆಯರು, 16–17 ವರ್ಷದ ಅಪ್ರಾಪ್ತ ವಿದ್ಯಾರ್ಥಿಗಳು ಸೇರಿದಂತೆ ಯುವಕರು ಮದ್ಯವ್ಯಸನಕ್ಕೆ ಒಳಗಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ಗ್ರಾಮವನ್ನು ಮದ್ಯಮುಕ್ತಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

**ಅಧಿಕಾರಿಗಳಿಗೆ ತಹಶೀಲ್ದಾರ್ ಕಟ್ಟುನಿಟ್ಟಿನ ಸೂಚನೆ**

ಮಹಿಳೆಯರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ ತಹಶೀಲ್ದಾರ್ ಸತ್ಯಮ್ಮ ಅವರು, ಸಭೆಯಲ್ಲಿ ಉಪಸ್ಥಿತರಿದ್ದ ಅಬಕಾರಿ ಇನ್ಸ್‌ಪೆಕ್ಟರ್ ಲಕ್ಷ್ಮೀದೇವಿ ಹಾಗೂ ಸಿಪಿಐ ಶಿವಾನಂದ ಗಾಣಿಗೇರ್ ಅವರಿಗೆ ಅಕ್ರಮ ಮದ್ಯ ಮಾರಾಟದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಸೇರಿದಂತೆ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅದೇ ರೀತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿಕುಮಾರ್ ಉಪ್ಪಾರ್, ಪಿಡಿಒ ಸುರೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಾಗರತ್ನ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಡಾಕ್ಷರಿ, ನಟರಾಜ್, ಗುರುಗುಂಟ ನಾಡ ತಹಶೀಲ್ದಾರ್ ರಾಘವೇಂದ್ರ ಕುಲಕರ್ಣಿ ಹಾಗೂ ಮಹಿಬೂಬ್ ಸಾಬ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಸ್ಥಳಗಳನ್ನು ತಾವೇ ಗುರುತಿಸಿ ತೋರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

**ಸಭೆಯಲ್ಲಿ ಉಪಸ್ಥಿತರಿದ್ದವರು**

ಸಭೆಯಲ್ಲಿ ನಾಗಮ್ಮ, ಭಾಗ್ಯಮ್ಮ, ದುರ್ಗಮ್ಮ, ಪದ್ದಮ್ಮ, ವಿಜಯಲಕ್ಷ್ಮಿ, ಪರಮಮ್ಮ, ಮಂಜುಳಾ, ಪವಡೆಮ್ಮ, ನರಸಮ್ಮ ಸೇರಿದಂತೆ ಗ್ರಾಮದ ಮಹಿಳೆಯರು ಭಾಗವಹಿಸಿದ್ದರು.

ವಿವಿಧ ಸಂಘಟನೆಗಳ ಮುಖಂಡರಾದ ಅಣ್ಣಯ್ಯ, ಹಂಪಯ್ಯ, ಕೃಷ್ಣ ನಾಯಕ, ಅಂಬಣ್ಣ, ನಾಗಪ್ಪ, ರಾಜು ನಾಯಕ್, ಹುಸೇನ್ ಸಾಬ್, ದ್ಯಾವಪ್ಪ ಕ್ಯಾತ, ಶಿವಕುಮಾರ್ ದಿನ್ನಿ, ಕನಕಪ್ಪ ಗಂಗಾವತಿ ಸೇರಿದಂತೆ ನೂರಾರು ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App