🔥 TRENDING ಗೂಗಲ್, ಸ್ಪೇಸ್‌ಎಕ್ಸ್‌ ಜೊತೆ ಕ್ಲೌಡ್ ಸೇವೆ... Bajwa Calls for Accountability Over Ar... ED Launches Probe into Senior Bureaucr... Punjab Civic Elections: Repolls Conduc... Manipur Police, Assam Rifles Detain KC... सासाराम रेलवे स्टेशन से पूरी आनंद विहा...
29 Nov 2026•
ગુજરાતી मराठी ਪੰਜਾਬੀ বাংলা

ಪಡಿತರ ಚೀಟಿ, ಗ್ಯಾಸ್ ಸಂಪರ್ಕ ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ AIMIM ಮನವಿಹೊಸ ಪಡಿತರ ಚೀಟಿ ವಿತರಣೆ ಆರಂಭಿಸಲು, KYC ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹಾಗೂ ಗ್ಯಾಸ್ ಏಜೆನ್ಸಿಗಳ ಸಾರ್ವಜನಿಕ ಕಿರುಕುಳ ತಡೆಯಲು ಆಗ್ರಹ:-ಶಬ್ಬೀರ್ ಅಹ್ಮದ್ ಹೌದಡಿ

✍️ Reporter: Khaja Hussain 🗓 29 Nov 2026, 11:59 AM 👁 12
Share: 💬 WhatsApp 📘 Facebook 𝕏 Post
**ರಾಯಚೂರು ಬ್ರೇಕಿಂಗ್ ನ್ಯೂಸ್**

# ಪಡಿತರ ಚೀಟಿ, ಗ್ಯಾಸ್ ಸಂಪರ್ಕ ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ AIMIM ಮನವಿ

### ಹೊಸ ಪಡಿತರ ಚೀಟಿ ವಿತರಣೆ ಆರಂಭಿಸಲು, KYC ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹಾಗೂ ಗ್ಯಾಸ್ ಏಜೆನ್ಸಿಗಳ ಸಾರ್ವಜನಿಕ ಕಿರುಕುಳ ತಡೆಯಲು ಆಗ್ರಹ:-ಶಬ್ಬೀರ್ ಅಹ್ಮದ್ ಹೌದಡಿ

**ರಾಯಚೂರು, ನ.28:** ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೊಸ ಪಡಿತರ ಚೀಟಿ ವಿತರಣೆ ಆರಂಭಿಸುವುದು, KYC ಹಾಗೂ ಬಯೋಮೆಟ್ರಿಕ್ ಸಮಸ್ಯೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಮತ್ತು LPG ಗ್ಯಾಸ್ ಸಂಪರ್ಕ ವರ್ಗಾವಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಆಗ್ರಹಿಸಿ, ಅಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ರಾಯಚೂರು ನಗರ ಘಟಕದ ವತಿಯಿಂದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಮನವಿ ಸಲ್ಲಿಸಲಾಗಿದೆ.

AIMIM ರಾಯಚೂರು ನಗರಾಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ ಅವರು ನ.28ರಂದು ಸಲ್ಲಿಸಿರುವ ಮನವಿಯಲ್ಲಿ, ಹೊಸ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಅನೇಕ ಅರ್ಹ ಕುಟುಂಬಗಳು ಸರ್ಕಾರದ ಆಹಾರ ಭದ್ರತಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ, ಬಾಕಿ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ವಿತರಣೆ ವಿಳಂಬಕ್ಕೆ ನಿಖರ ಕಾರಣವನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು KYC, ಆಧಾರ್ ಜೋಡಣೆ, ಸರ್ವರ್ ಹಾಗೂ ಬಯೋಮೆಟ್ರಿಕ್ ತಾಂತ್ರಿಕ ಸಮಸ್ಯೆಗಳಿಂದ ನ್ಯಾಯಬೆಲೆ ಅಂಗಡಿ ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ವಿಶೇಷವಾಗಿ ವೃದ್ಧರು, ಅಂಗವಿಕಲರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, KYC ಪೂರ್ಣಗೊಳ್ಳದ ಕಾರಣಕ್ಕೆ ಅರ್ಹ ಫಲಾನುಭವಿಗಳ ಪಡಿತರ ಸೌಲಭ್ಯ ಸ್ಥಗಿತಗೊಳ್ಳದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

LPG ಗ್ಯಾಸ್ ಸಂಪರ್ಕ ವರ್ಗಾವಣೆ ಸಂದರ್ಭದಲ್ಲಿ ಕುಟುಂಬದ ಸದಸ್ಯರ ನಡುವೆ ಅಥವಾ ವಿಳಾಸ ಬದಲಾವಣೆಯ ವೇಳೆ ಗ್ಯಾಸ್ ಏಜೆನ್ಸಿಗಳು ವಂಶಾವಳಿ ಪ್ರಮಾಣಪತ್ರ (ವಂಶವೃಕ್ಷ) ಕೇಳುತ್ತಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರಮಾಣಪತ್ರ ಕಡ್ಡಾಯವೆನ್ನುವ ನಿಯಮ ಅಥವಾ ಸುತ್ತೋಲೆ ಇದ್ದರೆ ಅದರ ಪ್ರತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಇಲ್ಲದಿದ್ದರೆ ಅನಗತ್ಯವಾಗಿ ವಂಶಾವಳಿ ಪ್ರಮಾಣಪತ್ರ ಕೇಳುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾಸ್ ಏಜೆನ್ಸಿ ಸಿಬ್ಬಂದಿ ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಸೂಚಿಸಬೇಕು. ಗ್ಯಾಸ್ ಕಂಪನಿಗಳ ಸೇಲ್ಸ್ ಆಫೀಸರ್‌ಗಳು ಸಾರ್ವಜನಿಕರ ದೂರುಗಳಿಗೆ ನಿಗದಿತ ಸಮಯದಲ್ಲಿ ಸ್ಪಂದಿಸುವ ವ್ಯವಸ್ಥೆ ರೂಪಿಸಬೇಕು. ದೂರು ಸ್ವೀಕರಿಸಿದ ಬಳಿಕ ಸ್ವೀಕೃತಿ ಸಂಖ್ಯೆ ನೀಡಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಬೇಕು. ಸಾರ್ವಜನಿಕರಿಗೆ ತೊಂದರೆ ನೀಡುವ ಏಜೆನ್ಸಿಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದಲ್ಲದೆ, ಸರ್ಕಾರದ ಉಚಿತ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ, ಅರ್ಹ ಫಲಾನುಭವಿಗಳಿಗೆ ಪಡಿತರ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಗ್ಯಾಸ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ತುರ್ತು ಪರಿಹಾರ ಕಲ್ಪಿಸಬೇಕು. ಸರ್ಕಾರ ಕೈಗೊಂಡ ಕ್ರಮಗಳ ವಿವರವನ್ನು ತಮ್ಮ ಕಚೇರಿಗೆ ಕಳುಹಿಸಿಕೊಡುವಂತೆ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
ಈ ಸಂದರ್ಭದಲ್ಲಿ
ಎ ಐ ಎಮ್ ಐ ಎಮ್ ಪದಾಧಿಕಾರಿಗಳಾದ
ತನ್ವೀರ್ ಅಹ್ಮದ್ ಖಾನ್ , ಸೊಹೈಲ್ ಖುರೇಷಿ, ಸೈಯದ್ ಮಹಾದ್,ಉಪಸ್ಥಿತರಿದ್ದರು

ವರದಿ ಖಾಜಾ ಹುಸೇನ್ ಬಾಬಾ
ಜಾಲಹಳ್ಳಿ
📲Get App