🔥 TRENDING CBI Brings Back Fugitive Sujith Kumar... Kunchacko Boban & Martin Prakkat Spark... Akali Dal Promises to Address Traders'... BSF confiscates 1.19 kg heroin at Punj... Patwari Ankit Pathak Sentenced to 3 Ye... Panther Spotted on CCTV Near Meera Ki...
26 Nov 2026•
ગુજરાતી मराठी ਪੰਜਾਬੀ বাংলা
Education

ಕಲ್ಯಾಣ ಕರ್ನಾಟಕಕ್ಕೆ 371(ಜೆ) ಮೀಸಲಾತಿ ಅನ್ವಯ 169 ಉಪನ್ಯಾಸಕ ಹುದ್ದೆಗಳನ್ನು ಮೀಸಲಿಡಲು ಆಗ್ರಹ

✍️ Reporter: Basavaraj pujari 🗓 26 Nov 2026, 04:51 PM 👁 30
Watch on: 📘 Facebook
Share: 💬 WhatsApp 📘 Facebook 𝕏 Post

ಕೇವಲ 36 ಹುದ್ದೆಗಳನ್ನು ಮೀಸಲಿಟ್ಟಿರುವುದು ರಾಜ್ಯಪಾಲರ 2013ರ ಆದೇಶದ ಉಲ್ಲಂಘನೆ: ಅಶೋಕಕುಮಾರ ಮಾನೂರೆ ಬೀದರ್: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿ ಪ್ರ

ಕಲ್ಯಾಣ ಕರ್ನಾಟಕಕ್ಕೆ 371(ಜೆ) ಮೀಸಲಾತಿ ಅನ್ವಯ 169 ಉಪನ್ಯಾಸಕ ಹುದ್ದೆಗಳನ್ನು ಮೀಸಲಿಡಲು ಆಗ್ರಹ

ಕೇವಲ 36 ಹುದ್ದೆಗಳನ್ನು ಮೀಸಲಿಟ್ಟಿರುವುದು ರಾಜ್ಯಪಾಲರ 2013ರ ಆದೇಶದ ಉಲ್ಲಂಘನೆ: ಅಶೋಕಕುಮಾರ ಮಾನೂರೆ

ಬೀದರ್: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 814 ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೇವಲ 36 ಹುದ್ದೆಗಳನ್ನು ಮೀಸಲಿಟ್ಟಿರುವುದು ಅನ್ಯಾಯವಾಗಿದ್ದು, ಇದನ್ನು ತಕ್ಷಣ ಸರಿಪಡಿಸಿ 169 ಹುದ್ದೆಗಳನ್ನು ಮೀಸಲಿಡಬೇಕು ಎಂದು ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯವಾದಿ ಅಶೋಕಕುಮಾರ ಮಾನೂರೆ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳ 814 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ.

ದಿನಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ 121 ಹುದ್ದೆಗಳು ಖಾಲಿ ಇವೆ. ರಾಜ್ಯಪಾಲರ ದಿನಾಂಕ 06-11-2013ರ ಕಲ್ಯಾಣ ಕರ್ನಾಟಕ ಪ್ರದೇಶದ ನೇಮಕಾತಿ ಮೀಸಲಾತಿ ಆದೇಶದ ಪ್ರಕಾರ ಎ ಮತ್ತು ಬಿ ವರ್ಗದ ಹುದ್ದೆಗಳಲ್ಲಿ ಶೇ.75ರಷ್ಟು ಹುದ್ದೆಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಬೇಕಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ 121 ಹುದ್ದೆಗಳಲ್ಲಿ 89 ಹುದ್ದೆಗಳು ಮೀಸಲಾಗಬೇಕು.

ಅಲ್ಲದೆ, ರಾಜ್ಯಾದ್ಯಂತ ಇರುವ ಹುದ್ದೆಗಳಲ್ಲಿ ಶೇ.8ರಷ್ಟು ಮೀಸಲಾತಿಯನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಬೇಕಾಗಿದ್ದು, ಅದರಂತೆ ಹೆಚ್ಚುವರಿಯಾಗಿ 80 ಹುದ್ದೆಗಳು ಮೀಸಲಾಗಬೇಕು. ಈ ಎರಡೂ ಅಂಶಗಳನ್ನು ಪರಿಗಣಿಸಿದರೆ ಒಟ್ಟು 169 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಲಭಿಸಬೇಕಾಗುತ್ತದೆ.

ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೇವಲ 36 ಹುದ್ದೆಗಳನ್ನು ಮಾತ್ರ ಮೀಸಲಿಟ್ಟಿರುವುದು ರಾಜ್ಯಪಾಲರ 2013ರ ಆದೇಶದ ಆಶಯಕ್ಕೆ ವಿರುದ್ಧವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಜನರಿಗೆ ತೀವ್ರ ಅನ್ಯಾಯ ಮಾಡಿದಂತಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಇನ್ನೂ ಅಧಿಕೃತ ಅಧಿಸೂಚನೆ ಹೊರಡಿಸುವ ಹಂತದಲ್ಲಿ ಈ ಲೋಪವನ್ನು ಸರಿಪಡಿಸಿ, ಕಲಂ 371(ಜೆ) ಅಡಿಯಲ್ಲಿ ರಾಜ್ಯಪಾಲರ ಆದೇಶವನ್ನು ಸಮರ್ಪಕವಾಗಿ ಪಾಲಿಸುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ 169 ಹುದ್ದೆಗಳನ್ನು ಮೀಸಲಿಡಬೇಕು ಎಂದು ಸಮಿತಿ ಒತ್ತಾಯಿಸಿದೆ.

ಸರ್ಕಾರ ಹಾಗೂ ಪ್ರಾಧಿಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯ ಸರಿಪಡಿಸದಿದ್ದಲ್ಲಿ ಕಾನೂನಾತ್ಮಕ ಮತ್ತು ಸಾಮಾಜಿಕ ಹೋರಾಟ ಅನಿವಾರ್ಯವಾಗಲಿದೆ ಎಂದು ಕಲಂ 371(ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿ, ಬೀದರ್ ಎಚ್ಚರಿಕೆ ನೀಡಿದೆ.
📲Get App