🔥 TRENDING Rupee Rebounds: India's Currency Becom... Amit Shah's Aide Impersonated to Carry... US Visa Rule Change Could Impact India... Foreigner Criticizes Mumbai Airport Im... Anjali Phougat Praises Shaan's Music f... Salman Khan Promotes Ayushmann Khurran...
30 Nov 2026•
ગુજરાતી मराठी ਪੰਜਾਬੀ বাংলা

ನಾರಾಯಣಪುರ ಬಲದಂಡೆ ನಾಲೆಗೆ 2.5 ಟಿಎಂಸಿ ಹೆಚ್ಚುವರಿ ನೀರು ಹರಿಸಲು ಆಗ್ರಹರೈತರ ಹಿತಕ್ಕಿಂತ ಕೆಲ ಮುಖಂಡರಿಗೆ ಸ್ವಪ್ರತಿಷ್ಠೆಯೇ ಮುಖ್ಯವಾಗಿದೆ; ಪ್ರಭಾಕರ ಪಾಟೀಲ ಇಂಗಳದಾಳ ಆಕ್ರೋಶ

✍️ Reporter: Khaja Hussain 🗓 23 Nov 2026, 09:30 PM 👁 53
Share: 💬 WhatsApp 📘 Facebook 𝕏 Post
.

**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ನಾರಾಯಣಪುರ ಬಲದಂಡೆ ನಾಲೆಗೆ 2.5 ಟಿಎಂಸಿ ಹೆಚ್ಚುವರಿ ನೀರು ಹರಿಸಲು ಆಗ್ರಹ

### ರೈತರ ಹಿತಕ್ಕಿಂತ ಕೆಲ ಮುಖಂಡರಿಗೆ ಸ್ವಪ್ರತಿಷ್ಠೆಯೇ ಮುಖ್ಯವಾಗಿದೆ; ಪ್ರಭಾಕರ ಪಾಟೀಲ ಇಂಗಳದಾಳ ಆಕ್ರೋಶ

**ದೇವದುರ್ಗ, ನ. 23:** ನಾರಾಯಣಪುರ ಬಲದಂಡೆ ನಾಲೆಗೆ (ಎನ್‌ಆರ್‌ಬಿಸಿ) ಸಮರ್ಪಕವಾಗಿ ನೀರು ಹರಿಸದ ಪರಿಣಾಮ ಕಾಲುವೆ ವ್ಯಾಪ್ತಿಯಲ್ಲಿ ಬೆಳೆಗಳು ಒಣಗುತ್ತಿವೆ. ಆದ್ದರಿಂದ ತಕ್ಷಣವೇ ಹೆಚ್ಚುವರಿಯಾಗಿ 2.5 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ದುರಂತದ ಹಾದಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ ಇಂಗಳದಾಳ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ಹಾಗೂ ಕೆಲವು ರೈತ ಮುಖಂಡರ ಧೋರಣೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಲುವೆ ನೀರನ್ನೇ ನಂಬಿ ರೈತರು ಪ್ರತಿ ಎಕರೆಗೆ ಬೀಜ, ಗೊಬ್ಬರ ಹಾಗೂ ಕ್ರಿಮಿನಾಶಕ ಸೇರಿದಂತೆ ಸುಮಾರು ₹1.50 ಲಕ್ಷ ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಿದ್ದಾರೆ. ಸದ್ಯ ಬೆಳೆಗಳಿಗೆ ನೀರಿನ ಅಗತ್ಯ ಹೆಚ್ಚಿದ್ದು, ಮುಂಬರುವ ಜನವರಿ ತಿಂಗಳವರೆಗೂ ನಿರಂತರವಾಗಿ ನೀರು ಹರಿಸಬೇಕು. ಸಚಿವರು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಮುಖ್ಯಮಂತ್ರಿಗಳಿಗೆ ವಾಸ್ತವ ಪರಿಸ್ಥಿತಿಯ ಮಾಹಿತಿ ಸರಿಯಾಗಿ ತಲುಪಿಲ್ಲ. ಹೀಗಾಗಿ ಶೀಘ್ರದಲ್ಲೇ ರೈತರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ನೀರು ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದರು.

ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಕೆಲವು ರೈತ ಮುಖಂಡರು ತಮ್ಮ ಸ್ವಪ್ರತಿಷ್ಠೆಗಾಗಿ 'ನಾ ಮುಂದೆ, ತಾ ಮುಂದೆ' ಎಂಬ ಧೋರಣೆ ಅನುಸರಿಸುತ್ತಿದ್ದು, ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತರ ಹಿತದೃಷ್ಟಿಯಿಂದ 7–8 ಸಂಘಟನೆಗಳು ಒಗ್ಗೂಡಿ ಭೀಮರಾಯನಗುಡಿಯ ಬಾಪೂಗೌಡ ವೃತ್ತದಲ್ಲಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದವು. ಈ ಹೋರಾಟಕ್ಕೆ ಪ್ರಾದೇಶಿಕ ಆಯುಕ್ತರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಈ ನಡುವೆ ಒಬ್ಬ ರೈತ ಮುಖಂಡರು ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಭೇಟಿ ಮಾಡಿ ಕೇವಲ 1.5 ಟಿಎಂಸಿ ನೀರು ಬಿಡುಗಡೆಗೆ ಒಪ್ಪಿಗೆ ಸೂಚಿಸಿ ಬಂದಿದ್ದಾರೆ. ಇಷ್ಟು ಪ್ರಮಾಣದ ನೀರು ಕಾಲುವೆಯ ಕೊನೆಯ ಭಾಗದ (ಟೇಲ್ ಎಂಡ್) ರೈತರಿಗೆ ತಲುಪುವುದಿಲ್ಲ. ಬದಲಾಗಿ ರೈತರ ನಡುವೆಯೇ ನೀರಿಗಾಗಿ ಸಂಘರ್ಷಕ್ಕೆ ಕಾರಣವಾಗಬಹುದು. ಅಷ್ಟಕ್ಕೂ ಒಪ್ಪಿಕೊಂಡಿದ್ದ 1.5 ಟಿಎಂಸಿ ನೀರೂ ಇನ್ನೂ ಬಿಡುಗಡೆಯಾಗಿಲ್ಲ ಎಂಬ ಗೊಂದಲವಿದೆ ಎಂದು ದೂರಿದರು.

ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಈ ತಿಂಗಳ 5ರಿಂದ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಇಳಕಲ್‌ಗೆ ಭೇಟಿ ನೀಡಿದ್ದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ರೈತರ ಸಮಸ್ಯೆ ಮನವರಿಕೆ ಮಾಡಿಕೊಟ್ಟಾಗ 2 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಆರು ದಿನಗಳಿಗೊಮ್ಮೆ ಮೂರು ಬಾರಿ ನೀರು ಹರಿಸುವಂತೆ ನಾವು ಒತ್ತಾಯಿಸಿದ್ದೆವು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ರೈತ ಸಂಘದ ರಾಜ್ಯಾಧ್ಯಕ್ಷ ನಾಗೇಂದ್ರ ಹಾಗೂ ಚಾಮರಾಜ ಮಾಲಿ ಪಾಟೀಲ್ ಅವರೂ ಈ ವಿಚಾರದಲ್ಲಿ ಬಿಗಿಪಟ್ಟು ಹಿಡಿದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಗೌಡ ಜಾಲಹಳ್ಳಿ, ರವಿಕುಮಾರ ಗಬ್ಬೂರು, ಶಾಂತಪ್ಪಗೌಡ, ರಮೇಶ, ಬೂದಯ್ಯಸ್ವಾಮಿ ಗಬ್ಬೂರು ಸೇರಿದಂತೆ ಅನೇಕ ರೈತರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App