🔥 TRENDING वारिसलीगंज में भक्ति और आस्था का महाकु... धर्म न्यूज़ अयोध्या डिप्टी साहब लालसोट व तहसीलदार लालसोट व... Road Accident Victim in Delhi to Recei... Committee Formed to Probe Irregulariti...
17 Nov 2026•
ગુજરાતી मराठी ਪੰਜਾਬੀ বাংলা

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ - ಮಾಸಿಕ 15,000 ರೂ. ಗೌರವಧನ ಸೇರಿದಂತೆ ಪ್ರಮುಖ ಬೇಡಿಕೆ ಈಡೇರಿಸಲು ಆಗ್ರಹ - ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ - ಸಿದ್ದರಾಮಯ್ಯ ತಪ್ಪಿದ ಮಾತನ್ನು ಡಿಕೆಶಿ ಈಡೇರಿಸಲಿ - ಅಲ್ಲಮಪ್ರಭು ಬೆಟ್ಟದೂರು

✍️ Reporter: Ningappa 🗓 17 Nov 2026, 10:17 PM 👁 8
Share: 💬 WhatsApp 📘 Facebook 𝕏 Post

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ - ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ - ಮಾಸಿಕ 15,000 ರೂ. ಗೌರವಧನ, ಬಾಕಿ ಪ್ರೋತ್ಸಾಹಧನ, ಸುಗಮಕಾರರ ಮುಂದುವರಿಕೆ ಸೇರಿದಂತೆ ಬೇಡಿಕೆ ಈಡೇರಿಸಲು ಆಗ್ರಹ - ಸಿದ್ದರಾಮಯ್ಯ ತಪ್ಪಿದ ಮಾತನ್ನು ಡಿಕೆಶಿ ಈಡೇರಿಸಲಿ ಎಂದು ಅಲ್ಲಮಪ್ರಭು ಬೆಟ್ಟದೂರು ಆಗ್ರಹ

ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭ

ಬೆಂಗಳೂರು: ಮಾಸಿಕ 15,000 ರೂ. ಗೌರವಧನ ಸೇರಿದಂತೆ ಪ್ರಮುಖ ಒತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಆರಂಭವಾಯಿತು.

ಪ್ರತಿಭಟನೆ ಉದ್ದೇಶಿಸಿ ಹಿರಿಯ ಸಾಹಿತಿಗಳು ಹಾಗೂ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಬೆಲೆ ಏರಿಕೆಯಿಂದ ಜನಜೀವನ ದುಸ್ತರವಾಗಿದೆ. ಬೇರೆ ರಾಜ್ಯಗಳಲ್ಲಿ ಆಶಾಗಳಿಗೆ ಹೆಚ್ಚಿನ ಗೌರವಧನ ನೀಡಲಾಗುತ್ತಿದೆ. ಕರ್ನಾಟಕದ ಆಶಾಗಳಿಗೆ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ 10,000 ರೂ. ವೇತನದ ಭರವಸೆ ನೀಡಿ, ಅದನ್ನು ಈಡೇರಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಮುಂದುವರೆದು ಮಾತನಾಡಿದ ಅವರು, ಮಹಿಳೆಯರು ಮನೆ ತೊರೆದು ಆಶಾಗಳಾಗಿ ಸಮಾಜದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಆಶಾಗಳ ಬೇಡಿಕೆ ಈಡೇರಿಸಿ, ಮಹಿಳೆಯರ ಶ್ರಮಕ್ಕೆ ತಕ್ಕ ಗೌರವ ನೀಡಬೇಕು. ನಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ 10,000 ರೂ. ಕೊಡುತ್ತಿದ್ದೇವೆ. ಒಬ್ಬ ವ್ಯಕ್ತಿ ಈ ಸಂಬಳ ಕೊಡಲು ಸಾಧ್ಯವಿರುವಾಗ ಸರ್ಕಾರಕ್ಕೆ ಏಕೆ ಸಾಧ್ಯವಿಲ್ಲ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನ್ನು ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿಕೊಡಬೇಕು ಎಂದು ಆಗ್ರಹಿಸಿದರು.

ಇಂದಿನ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ಇಂದು ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವ ಬದಲು ಅವರನ್ನು ಮನೆಗೆ ಕಳಿಸುವ ಹುನ್ನಾರ ನಡೆಸಿದೆ. ಅವಿವೇಕಿ ಸರ್ಕಾರವು ಸಾವಿರಾರು ಆಶಾ ಕಾರ್ಯಕರ್ತೆಯರು ಮತ್ತು ಸುಗಮಕಾರರ ಕೆಲಸ ಕಿತ್ತುಕೊಳ್ಳಲು ಹೊಂಚು ಹಾಕಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ರಾಜ್ಯ ಸರ್ಕಾರ 15,000 ರೂ. ನಿಗದಿ ಪಡಿಸಿಲ್ಲ. ಕೇಂದ್ರದ ಬಿಜೆಪಿ ಸರ್ಕಾರವು 1,500 ರೂ. ಹೆಚ್ಚಿಸುವ ಘೋಷಣೆ ಮಾಡಿತ್ತು. ಅದನ್ನು ಕೂಡ ಈಡೇರಿಸಿಲ್ಲ. ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಕೂಡ ಒಂದೇ. ಈ ಸ್ಪಷ್ಟತೆಯೊಂದಿಗೆ ನಮ್ಮ ಚಳುವಳಿ ಮುನ್ನಡೆಯಬೇಕು ಎಂದು ಕರೆ ನೀಡಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಲತಾ ಮೈಸೂರು ಮಾತನಾಡಿ, ಸತ್ಯಹರಿಶ್ಚಂದ್ರರ ನೆಲದಲ್ಲಿ ಹೆಜ್ಜೆ ಹೆಜ್ಜೆಗೂ ಸುಳ್ಳಾಡುವ ಸರ್ಕಾರವು ನಮ್ಮನ್ನಾಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂದು ಆಶಾಗಳಿಗೆ ನೀಡುವ 5,000 ರೂ. ಮಾಸಿಕ ಗೌರವಧನವು ಸರ್ಕಾರಿ ಅಧಿಕಾರಿಗಳ ಒಂದು ಹೊತ್ತಿನ ಟೀ, ಬಿಸ್ಕೆಟ್‌ಗೆ ಸಲ್ಲುವ ವೆಚ್ಚಕ್ಕಿಂತ ಕಡಿಮೆ ಇದೆ. ಸರ್ಕಾರಿ ಮೇಲಧಿಕಾರಿಗಳಿಗೆ ಗರಿಷ್ಠ ವೇತನ ನೀಡುವ ಸರ್ಕಾರಗಳು, ಆಶಾಗಳಿಗೆ ಕನಿಷ್ಠ ವೇತನವನ್ನು ನೀಡದೇ ಇರುವುದೇ ಅನ್ಯಾಯ. ಇಂದು ಬಿಡಿಬಿಡಿಯಾಗಿದ್ದ ಆಶಾಗಳು ಒಗ್ಗಟ್ಟಾಗಿ ಒಂದಾಗಿದ್ದಾರೆ. ಈ ಒಗ್ಗಟ್ಟಿನ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಎ. ಮುರಿಗೆಪ್ಪ ಮಾತನಾಡಿ, ಆತಂಕ ಮತ್ತು ಆವೇಶವನ್ನು ಹೊತ್ತು ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ ಬಂದಿದ್ದೀರಿ. ನೀವು ಕೇಳುತ್ತಿರುವ 15,000 ರೂ. ಗೌರವಧನ ದೊಡ್ಡ ಮೊತ್ತವಲ್ಲ. ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ, ಡಿ-ಮಾರ್ಟ್‌ನಲ್ಲಿರುವ ಸೇಲ್ಸ್‌ಮನ್‌ಗಳಿಗೆ ಈಗ ಸರ್ಕಾರ ನಿಮಗೆ ನೀಡುತ್ತಿರುವ 5,000 ರೂ. ಗಿಂತ ಹೆಚ್ಚಿನ ಸಂಬಳವಿದೆ. ನಮ್ಮ ಹಳ್ಳಿಗಳಲ್ಲಿ ಕೂಸಿರುವ ಮನೆಗೆಲ್ಲಾ ಆಶಾ ಕಾರ್ಯಕರ್ತೆಯರು ಪರಿಚಿತರೇ ಹೊರತು, ಯಾವ ಡಿಸಿ ಅಥವಾ ತಹಶೀಲ್ದಾರರೂ ಜನರಿಗೆ ಪರಿಚಯವಿಲ್ಲ. ನೀವು ಹೋಗಿ ಸೇವೆ ಸಲ್ಲಿಸುವ ಮನೆಗಳಿಗೆಲ್ಲಾ ನಿಮ್ಮ ನೋವಿನ ಕೂಗು ಮುಟ್ಟಬೇಕು. ಇಡೀ ಜನಸಮುದಾಯವೇ ನಿಮ್ಮೊಂದಿಗೆ ನಿಂತು ಹೋರಾಡಬೇಕು. ಇಂದು ಮಾತಿಗೆ ತಪ್ಪುವುದು ಸರ್ಕಾರದ ಹವ್ಯಾಸವಾಗಿದೆ. ಈ ಕೂಡಲೇ 15,000 ರೂ. ಗೌರವಧನ ನಿಗದಿಯಾಗಬೇಕು ಮತ್ತು ಪ್ರತಿ ವರ್ಷ ಬೆಲೆ ಏರಿಕೆಗೆ ಅನುಗುಣವಾಗಿ ಇಂತಿಷ್ಟು ಶೇಕಡಾ ಗೌರವಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ. ನಾಗಲಕ್ಷ್ಮಿ ಪ್ರಸ್ತಾವಿಕವಾಗಿ ಮಾತನಾಡಿ, ಇಂದು ಸರ್ಕಾರ ಪದೇ ಪದೇ ಆಶಾಗಳನ್ನು ಬೀದಿಗೆ ತಳ್ಳುತ್ತಿರುವ ಕಾರಣ ಆಶಾಗಳಿಗೆ ಹೋರಾಟ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕಳೆದ 18 ವರ್ಷಗಳಿಂದ ಹಳ್ಳಿಗಾಡಿನ ಪ್ರದೇಶದಲ್ಲಿ, ನಗರದ ಕೊಳಚೆ ಪ್ರದೇಶಗಳಲ್ಲಿ ಹಗಲು ರಾತ್ರಿ ದುಡಿಯುವ ಆಶಾಗಳಿಗೆ ಇಂದು ದುಡಿಮೆಗೆ ತಕ್ಕ ಪ್ರತಿಫಲವಿಲ್ಲ. ಕಳೆದ ಬಾರಿ ಜನವರಿ 2025ರಲ್ಲಿ ಸರ್ಕಾರವು 10,000 ರೂ. ನಿಗದಿ ಮಾಡುತ್ತೇವೆ ಎಂದ ಮಾತಿಗೆ ಬೆಲೆ ಕೊಟ್ಟು ಆಶಾಗಳು ಹೋರಾಟವನ್ನು ಹಿಂತೆಗೆದುಕೊಂಡಿದ್ದರು. ಆದರೆ ಇಂದಿಗೂ ಇದು ಆಶ್ವಾಸನೆಯಾಗಿಯೇ ಉಳಿದಿದೆ. ನಮ್ಮ ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ 10,000 ರೂ. ಹಾಗೂ 12,000 ರೂ. ಮಾಸಿಕ ವೇತನ ನಿಗದಿಪಡಿಸುವುದಾದರೆ ನಮ್ಮ ರಾಜ್ಯದ ಆಶಾಗಳಿಗೇಕಿಲ್ಲ. ದುಡಿಯುವ ಹೆಣ್ಣುಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕಾಶೀನಾಥ್ ಅಂಬಲಗಿ, ಪ್ರಗತಿಪರ ಹೋರಾಟಗಾರರಾದ ಉಗ್ರ ನರಸಿಂಹೇಗೌಡ, ಉಚ್ಚನ್ಯಾಯಾಲಯದ ಹಿರಿಯ ವಕೀಲರಾದ ಖಿಸಾರ್, ಮೆಡಿಕಲ್ ಸರ್ವಿಸ್ ಸೆಂಟರ್ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಸುಧಾ ಕಾಮತ್, ಎಐಎಂಎಸ್ಎಸ್ ರಾಜ್ಯ ಉಪಾಧ್ಯಕ್ಷರಾದ ಆರ್. ಗೀತಾ ಮೊದಲಾದವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು. ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ, ಆಶಾ ಸಂಘದ ರಾಜ್ಯ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಹೋರಾಟಕ್ಕೆ ರಾಜ್ಯದ ನೂರಾರು ಗಣ್ಯರು ಬೆಂಬಲ ಸೂಚಿಸಿದ್ದಾರೆ. ಅನೇಕ ಸಾಮಾಜಿಕ ಹೋರಾಟಗಾರರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಸ್ವತಃ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಸಂಘದ ಪ್ರಮುಖ ಬೇಡಿಕೆಗಳು:
1. 15,000 ರೂ. ನಿಶ್ಚಿತ ಮಾಸಿಕ ಗೌರವಧನ: ವಿವಿಧ ರಾಜ್ಯಗಳಲ್ಲಿ ಹೆಚ್ಚಿಸಿರುವಂತೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ಗೌರವಧನ ನಿಗದಿಯಾಗಬೇಕು.
2. ಒತ್ತಾಯದ ಮೊಬೈಲ್ ಕೆಲಸ ಕೈಬಿಡಿ: ಎಲ್ಲಾ ಆ್ಯಪ್‌ಗಳ ಮೂಲಕ ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುವುದನ್ನು ಕೈಬಿಡಬೇಕು, ಅಥವಾ ಮೊಬೈಲ್ ಕೆಲಸಗಳಿಗೆ ಮೊಬೈಲ್ ಒದಗಿಸಿ ಪ್ರೋತ್ಸಾಹಧನ ನಿಗದಿ ಮಾಡಬೇಕು. ಮೊಬೈಲ್ ಕೆಲಸ ಮಾಡಲು ಸಾಧ್ಯವಾಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.
3. ನಿವೃತ್ತರಿಗೆ ಇಡಿಗಂಟು: ಕಳೆದ ಹಲವಾರು ವರ್ಷಗಳಿಂದ ನಿವೃತ್ತಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿ ಇರುವ ಇಡಿಗಂಟನ್ನು ನೀಡಬೇಕು.
4. ಬಾಕಿ ಪ್ರೋತ್ಸಾಹಧನ ಬಿಡುಗಡೆ: ರಾಜ್ಯದಾದ್ಯಂತ ಆಶಾ ನಿಧಿ ಮೂಲಕ ಕೇಂದ್ರದ ಪ್ರೋತ್ಸಾಹಧನವು ಆಶಾ ಕಾರ್ಯಕರ್ತೆಯರು ಮಾಡಿದ ಕೆಲಸಕ್ಕೆ ತಕ್ಕಷ್ಟು ಬರುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು.
5. ಆಶಾ ಸುಗಮಕಾರರ ಮುಂದುವರಿಕೆ ಮತ್ತು 1,500 ರೂ. ಬಾಕಿ: ಮಾರ್ಗಸೂಚಿಗೆ ವಿರುದ್ಧವಾಗಿ ಸುಗಮಕಾರರ ಸೇವೆಯನ್ನು 25-02-2025 ರಂದು ಹಿಂಪಡೆಯಲಾಗಿದ್ದು, ನಿಯಮಾನುಸಾರ ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. ಆರ್‌ಒಪಿಯಲ್ಲಿ ಅನುಮೋದನೆಯಾದಂತೆ 2024-25ನೇ ಸಾಲಿನಲ್ಲಿ ಹೆಚ್ಚಳವಾದ ಮಾಸಿಕ 1,500 ರೂ. ರಂತೆ ಒಂದು ವರ್ಷದ ಬಾಕಿ ಹಣ ನೀಡಬೇಕು.
6. ಎನ್‌ಐಒಎಸ್ ತರಬೇತಿಗೆ ವಿಶೇಷ ಪ್ರೋತ್ಸಾಹಧನ: ಕೇಂದ್ರದ ನಿರ್ದೇಶನದಂತೆ, ರಾಜ್ಯದಲ್ಲಿ ಬಾಕಿ ಇರುವ ಎನ್‌ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಮತ್ತು ಆಶಾ ಸುಗಮಕಾರರಿಗೆ ಒಂದು ತರಬೇತಿಗೆ 5,000 ರೂ. ರಂತೆ ವಿಶೇಷ ಪ್ರೋತ್ಸಾಹಧನವನ್ನು ಕೂಡಲೇ ನೀಡಬೇಕು.
7. ತೀವ್ರ ಅನಾರೋಗ್ಯದ ಅವಧಿಯಲ್ಲಿ ಭದ್ರತೆ: ತೀವ್ರ ರೋಗದ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ದೈನಂದಿನ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಬೇಕು.
8. ನಿವೃತ್ತಿ ಸೌಲಭ್ಯ 5 ಲಕ್ಷ ರೂ.: ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ನಿವೃತ್ತಿ ಸೌಲಭ್ಯವನ್ನು 5 ಲಕ್ಷ ರೂ. ಗೆ ಹೆಚ್ಚಿಸಬೇಕು.

ಈ ಹಕ್ಕೊತ್ತಾಯಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಲು ಆಶಾ ಕಾರ್ಯಕರ್ತೆಯರು ದೃಢವಾಗಿ ನಿರ್ಧರಿಸಿದ್ದಾರೆ.
📲Get App